ಕಾರವಾರ(ಉತ್ತರ ಕನ್ನಡ): ಶಾಲೆಗಳಲ್ಲಿ ಸಾಮಾನ್ಯವಾಗಿ ಆಟ - ಪಾಠದ ಜತೆಗೆ ಕೆಲ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಆದರೆ, ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಶಾಲೆಯೊಂದರಲ್ಲಿ ಮಕ್ಕಳನ್ನು ಗದ್ದೆಗೆ ಇಳಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸುವ ಮೂಲಕ ವಿಭಿನ್ನವಾಗಿ ಪಾಠ ಮಾಡಲಾಗಿದೆ.
ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳುತ್ತಾ ತಲ್ಲೀನರಾಗುತ್ತಿದ್ದ, ಅಂಕೋಲಾ ತಾಲೂಕಿನ ತೆಂಕಣಕೇರಿ ಗ್ರಾಮದ ಆದರ್ಶ ಪ್ರೌಢಶಾಲೆಯ ಮಕ್ಕಳಿಗೆ ಗದ್ದೆ ಎಂದರೆ ಏನು?, ಬೇಸಾಯ ಎಂದರೆ ಹೇಗೆ?, ನಾಟಿ ಹೇಗೆ ಮಾಡಬೇಕು ಎಂದೆಲ್ಲ ಮಾಹಿತಿ ನೀಡುತ್ತಾ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಲಾಗಿತ್ತು. ಮಕ್ಕಳು ಮಳೆಯನ್ನು ಲೆಕ್ಕಿಸದೇ ಉತ್ಸುಕತೆಯಲ್ಲಿ ಪಾಲ್ಗೊಂಡು ಗದ್ದೆಯಲ್ಲಿ ನಾಟಿ ಮಾಡುವುದು ಎಲ್ಲರ ಗಮನ ಸೆಳೆಯಿತು.
ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು: ತರಗತಿಯಲ್ಲಿ ಪಾಠ ಮಾಡುವುದಕ್ಕಿಂತ, ಪ್ರಾಯೋಗಿಕವಾಗಿ ತೋರ್ಪಡಿಸುವುದರಿಂದ, ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಮನದಟ್ಟು ಮಾಡಲು ಸಾಧ್ಯ ಎಂಬ ಆಶಯದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಗದ್ದೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಕೃಷಿ ಶಿಕ್ಷಣವನ್ನು ನೀಡಲಾಯಿತು. ಪಠ್ಯದಲ್ಲಿರುವ ಕೃಷಿ ಚಟುವಟಿಕೆ ಪಾಠ ಮಾಡಬೇಕಿದ್ದ ಶಿಕ್ಷಕರು ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದುಕೊಂಡು ಭತ್ತದ ನಾಟಿ ಮಾಡುವ ಪ್ರಾತ್ಯಕ್ಷಿಕೆ ತೋರಿಸಿದ್ದಾರೆ. ರೈತರ ಪರಿಶ್ರಮವನ್ನು ಅರಿತ ವಿದ್ಯಾರ್ಥಿಗಳು ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಪಾಠವನ್ನು ಮಾಡುತ್ತಿರುವ ಸಂದರ್ಭದಲ್ಲಿ ಹಲವು ಪ್ರಶ್ನೆಗಳನ್ನು ಕೇಳಿ, ತಮ್ಮಲ್ಲಿರುವ ಅನುಮಾನಗಳನ್ನು ಬಗೆಹರಿಸಿಕೊಂಡರು. ಹಾಗೆಯೇ ಮಕ್ಕಳ ನಾಟಿ ಮಾಡುವ ಉತ್ಸಾಹವನ್ನು ಕಂಡ ಪಾಲಕರು ಹಾಗೂ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದರು.