ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸೃಷ್ಟಿಯಾಗುತ್ತಿರುವ ಪ್ರವಾಹವು ನದಿ ತೀರದ ಜನರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಅದರಲ್ಲಿಯೂ ಅಂಕೋಲಾ ತಾಲೂಕಿನಲ್ಲಿ ಉಕ್ಕಿ ಹರಿದ ಗಂಗಾವಳಿ ನದಿಯಿಂದಾಗಿ ಇಲ್ಲಿನ ಗ್ರಾಮಗಳು ಪ್ರತಿ ವರ್ಷವೂ ಮುಳುಗಡೆಯಾಗಿ ಸಾಕಷ್ಟು ನಷ್ಟವಾಗುತ್ತಿದೆ. ಇದೇ ರೀತಿ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರೂರು ಗ್ರಾಮಸ್ಥರು ಇದೀಗ ಊರಿಗೆ ಊರೇ ತೊರೆಯಲು ಸಿದ್ದರಾಗಿದ್ದಾರೆ.
ಶಿರೂರು ಗ್ರಾಮದಲ್ಲಿ 2019ರಲ್ಲಿ ಮೊದಲ ಬಾರಿಗೆ ಪ್ರವಾಹ ಬಂದಾಗ ಒಂದಿಷ್ಟು ಮನೆಗಳು ನೆಲಸಮವಾಗಿತ್ತಾದರೂ ಹೇಗೋ ಅವರಿವರ ಸಹಕಾರದಲ್ಲಿ ಮನೆಗಳನ್ನು ಮರು ನಿರ್ಮಾಣ ಮಾಡಿಕೊಂಡಿದ್ದರು. ಆದರೆ, ಅದಾದ ಬಳಿಕ ಮತ್ತೆರಡು ವರ್ಷವೂ ನೆರೆ ಬಂದು ಎಲ್ಲವೂ ಕೊಚ್ಚಿ ಹೋಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮತ್ತದೇ ಪ್ರವಾಹ ಸೃಷ್ಟಿಯಾಗುವ ಆತಂಕ ಶುರುವಾಗಿದೆ.
ಹಾಗಾಗಿ, ಕೂಡಲೇ ಸರ್ಕಾರ ಮುಳುಗಡೆಯಾಗುವ ನದಿ ಪಾತ್ರದ ಮನೆಗಳಿಗೆ ಪರ್ಯಾಯವಾಗಿ ಬೇರೆಡೆ ಜಾಗ ನೀಡಿ ಮನೆ ಕಟ್ಟಿ ಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಿರೂರು ಗ್ರಾಮದಲ್ಲಿ ಸುಮಾರು 350ಕ್ಕೂ ಅಧಿಕ ಮನೆಗಳಿವೆ. ಈ ಭಾಗದ ಬಹುತೇಕರು ಕೃಷಿ, ಕೂಲಿ, ಮೀನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಗಂಗಾವಳಿ ನದಿ ಜೀವನಾಧಾರಾವಾಗಿದ್ದರೂ ಕಳೆದ ಮೂರು ವರ್ಷಗಳಿಂದ ವಾರಗಳ ಕಾಲ ನದಿ ಉಕ್ಕಿ ಹರಿಯುವ ಕಾರಣ ಬಹುತೇಕರಿಗೆ ನದಿ ಪಕ್ಕದ ಜೀವನ ದುಸ್ಥರವಾಗಿ ಪರಿಣಮಿಸಿದೆ.
ಪ್ರವಾಹದಿಂದ ನೀರು ನುಗ್ಗಿದ ಮನೆಗಳಿಗೆ ತಕ್ಷಣ ಹತ್ತು ಸಾವಿರ ಪರಿಹಾರ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತಾದರೂ ಕೆಲವರಿಗೆ ಈ ಪರಿಹಾರವೇ ಇನ್ನೂ ಕೈಸೇರಿಲ್ಲ.