ಕಾರವಾರ(ಉತ್ತರಕನ್ನಡ): ಕಳೆದೊಂದು ವಾರದ ಅವಧಿಯಲ್ಲಿ ಜಿಲ್ಲೆಯಾದ್ಯಂತ 4,960 ಮಿಮೀ ಮಳೆ ಸುರಿದಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮಳೆ ಪ್ರಾರಂಭವಾದ ಒಂದೇ ತಿಂಗಳಲ್ಲಿ 91 ಮನೆಗಳಿಗೆ ಹಾನಿ ಉಂಟಾಗಿದೆ. ಮೂರು ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಉತ್ತರಕನ್ನಡದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕಾರವಾರ ತಾಲೂಕಿನ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ರಸ್ತೆಯಂಚಿನ ಮನೆಗಳು ಜಲಾವೃತವಾಗಿದ್ದವು. ಮಳೆಗೆ ಇದುವರೆಗೆ 91 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 81 ಮನೆಗಳಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ. ಈಗಾಗಲೇ ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಮಳೆಗೆ ಓರ್ವ ಸಾವನ್ನಪ್ಪಿದ್ದು, ಎರಡು ಜಾನುವಾರುಗಳು ಅಸುನೀಗಿವೆ. ತುರ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಜೊತೆಗೆ ಕಂಟ್ರೋಲ್ ರೂಮ್ ತೆರೆದು 24 ಗಂಟೆಯೂ ಯಾವುದೇ ಸಮಸ್ಯೆ ಆದರೂ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಜುಲೈ 9ರ ಬೆಳಗ್ಗೆವರೆಗೆ ರೆಡ್ ಅಲರ್ಟ್ ನೀಡಿದೆ. ಭಾರಿ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಹೊನ್ನಾವರ, ಕುಮಟಾ, ಭಟ್ಕಳ ಹಾಗೂ ಮಲೆನಾಡು ಭಾಗದ ಶಿರಸಿ, ಸಿದ್ದಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ಕೆಲವೆಡೆ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಕುರಿತು ಪರಿಶೀಲನೆ ನಡೆಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಇದನ್ನೂ ಓದಿ:ನದಿಯಲ್ಲಿ ಕಾರು ಕೊಚ್ಚಿ ಹೋಗಿ ಸೇರಿ 9 ಜನ ಸಾವು, ಪವಾಡದಂತೆ ಬದುಕುಳಿದ ಮಗು