ಕಾರವಾರ (ಉತ್ತರಕನ್ನಡ): ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಆರ್ಭಟ ಶುರುವಾಗಿದೆ. ಈ ವರ್ಷದ ಮೊದಲ ಪ್ರಕರಣ ಸಿದ್ದಾಪುರ ತಾಲೂಕಿನಲ್ಲಿ ದೃಢಪಟ್ಟಿದ್ದಲ್ಲದೇ, ಮೊದಲ ಸಾವಿನ ಪ್ರಕರಣ ಕೂಡ ಸಿದ್ದಾಪುರದಲ್ಲೇ ವರದಿಯಾಗಿದೆ. ಈವರೆಗೆ ಎಂಟು ಪ್ರಕರಣಗಳು ಪತ್ತೆಯಾಗಿವೆ.
ಸೊರಬ ತಾಲೂಕಿನ ಕ್ಯಾಸನೂರು ಅರಣ್ಯದಲ್ಲಿ 1957ರಲ್ಲಿ ಮೊದಲ ಬಾರಿಗೆ ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿ, ಈವರೆಗೆ ಸಾವಿರಾರು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ. ಪ್ರತಿ ವರ್ಷವೂ ಮಲೆನಾಡಿನಲ್ಲಿ ಈ ಕಾಯಿಲೆಗೆ ಜನರು ಬಲಿಯಾಗುತ್ತಿದ್ದಾರೆ. ಒಂದು ವರ್ಷದ ಹಿಂದೆ ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿ, ಪ್ರಕರಣಗಳು ನಿಯಂತ್ರಣಕ್ಕೆ ಬಂದಿತ್ತು. ಆದರೆ ಅದಕ್ಕೂ ಮೊದಲ ವರ್ಷ 63 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಆ ಪೈಕಿ 13 ಜನರು ಮೃತಪಟ್ಟಿದ್ದಾರೆ.