ಕರ್ನಾಟಕ

karnataka

ETV Bharat / state

ಉದ್ಯೋಗ ಸೃಷ್ಟಿಸಲಿರುವ ಅಂಕೋಲಾ ವಿಮಾನ ನಿಲ್ದಾಣ: ಜಿಲ್ಲೆಯ ಯುವಕರಿಗೆ ಬೇಕಿದೆ ಕೌಶಲ್ಯ ತರಬೇತಿ - Uttara Kannada people demands skill training for youth

ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಯೋಜನೆ ಪ್ರಗತಿಯಲ್ಲಿದ್ದು, ಸೂಕ್ತ ಕೌಶಲ್ಯ ತರಬೇತಿ ನೀಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Uttara Kannada people demands skill training for youth
ಉದ್ಯೋಗ ಸೃಷ್ಟಿಸಲಿರುವ ಅಂಕೋಲಾ ವಿಮಾನ ನಿಲ್ದಾಣ

By

Published : Feb 12, 2022, 8:37 AM IST

ಕಾರವಾರ:ಹತ್ತಾರು ಪ್ರವಾಸಿ ತಾಣಗಳನ್ನು ಹೊಂದುವ ಮೂಲಕ ದೇಶ - ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುವ ಜಿಲ್ಲೆ ಉತ್ತರಕನ್ನಡ. ಆದರೆ, ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಇಲ್ಲಿನ ವಿದ್ಯಾವಂತ ಯುವಕ, ಯುವತಿಯರು ಉದ್ಯೋಗಕ್ಕಾಗಿ ನೆರೆಯ ಜಿಲ್ಲೆ, ರಾಜ್ಯಗಳಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಆದರೆ ಇದೀಗ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಯೋಜನೆ ಪ್ರಗತಿಯಲ್ಲಿದ್ದು, ಸೂಕ್ತ ಕೌಶಲ್ಯ ತರಬೇತಿ ನೀಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಯುವಕರಿಗೆ ಕೌಶಲ್ಯ ತರಬೇತಿ ನೀಡುವಂತೆ ಆಗ್ರಹ

ಸ್ಥಳೀಯರಿಗೆ ಸಿಗದ ಉದ್ಯೋಗ:ದಶಕಗಳಿಂದ ಜಿಲ್ಲೆಯ ವಿದ್ಯಾವಂತ ಯುವಕ - ಯುವತಿಯರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಸ್ಥಳೀಯವಾಗಿ ಯಾವುದೇ ಕೈಗಾರಿಕೆಗಳು ಇಲ್ಲದಿರುವುದು ಇದಕ್ಕೆ ಕಾರಣ. ಅದರಲ್ಲಿಯೂ ಜಿಲ್ಲೆಯ ಗಡಿ ತಾಲೂಕು ಕಾರವಾರದಲ್ಲಿ ದೇಶದ ಪ್ರತಿಷ್ಠಿತ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರ ಯೋಜನೆಗಳಿದ್ದರೂ ಸ್ಥಳೀಯವಾಗಿ ಹೆಚ್ಚಿನವರಿಗೆ ಉದ್ಯೋಗಾವಕಾಶ ಸಿಕ್ಕಿಲ್ಲ. ಈ ಕಾರಣದಿಂದ ನಿತ್ಯ ಇಲ್ಲಿನ ಯುವಕರು ನೆರೆಯ ಗೋವಾಕ್ಕೆ ಉದ್ಯೋಗಕ್ಕಾಗಿ ತೆರಳಬೇಕಾದ ಪರಿಸ್ಥಿತಿ ಇದೆ.

ಉದ್ಯೋಗಗಳಿಗೆ ಪೂರಕವಾದ ತರಬೇತಿಗೆ ಆಗ್ರಹ:ಸದ್ಯ ಕಾರವಾರ ತಾಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಇದರಲ್ಲಿ ವಿಮಾನ ನಿಲ್ದಾಣ ಸಹ ನಿರ್ಮಾಣವಾಗಲಿದೆ. ಇದನ್ನ ನಾಗರಿಕರು ಬಳಸುವಂತೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯೋಜನೆಯನ್ನ ರೂಪಿಸಲಾಗುತ್ತಿದೆ. ಅಂಕೋಲಾ ತಾಲೂಕಿನ ಅಲಗೇರಿ ಗ್ರಾಮದಲ್ಲಿ ಉದ್ದೇಶಿತ ವಿಮಾನ ನಿಲ್ದಾಣ ರೂಪುಗೊಳ್ಳಲಿದೆ.

ಹೀಗಾಗಿ ವಿಮಾನ ನಿಲ್ದಾಣ ಸಂಬಂಧಿತ ಉದ್ಯೋಗಗಳ ಕುರಿತ ಕೌಶಲ್ಯ ತರಬೇತಿಗಳು ಸಿಗುವಂತಾದಲ್ಲಿ ಇಲ್ಲಿನ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಸಿಗಲಿದೆ. ಹೀಗಾಗಿ ಸ್ಥಳೀಯ ಜಿಲ್ಲಾಡಳಿತ ಜಿಲ್ಲೆಯ ವಿದ್ಯಾವಂತ ಯುವಕ ಯುವತಿಯರಿಗೆ ಅಗತ್ಯ ಮಾಹಿತಿಯನ್ನ ಒದಗಿಸಿಕೊಡುವ ಮೂಲಕ ವಿಮಾನ ನಿಲ್ದಾಣದಲ್ಲಿನ ಉದ್ಯೋಗಗಳಿಗೆ ಪೂರಕವಾದ ತರಬೇತಿಗಳನ್ನ ಪಡೆದುಕೊಳ್ಳಲು ಸಹಕರಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಹೆಚ್ಚಿನವರು ಹೊರಗುತ್ತಿಗೆ ನೌಕರರು:ಜಿಲ್ಲೆಯಲ್ಲಿ ಈ ಹಿಂದೆ ನೌಕಾನೆಲೆ ಆರಂಭದಲ್ಲಿ ಸಾವಿರಾರು ಕುಟುಂಬಗಳು ಜಾಗ ನೀಡಿ ನಿರಾಶ್ರಿತರಾಗಿದ್ದರು. ಈ ವೇಳೆ ನಿರಾಶ್ರಿತರಿಗೆ ಪರಿಹಾರದೊಂದಿಗೆ ಕುಟುಂಬದ ಓರ್ವರಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಲಾಗಿತ್ತಾದರೂ ಸೂಕ್ತ ಕೌಶಲ್ಯವನ್ನ ಹೊಂದಿರದ ಹಿನ್ನೆಲೆ ಕೆಲವೇ ಕೆಲವರು ಕೆಳಮಟ್ಟದ ಉದ್ಯೋಗ ಮಾತ್ರ ಪಡೆದಿದ್ದಾರೆ. ಅದರಲ್ಲಿ ಹೆಚ್ಚಿನವರು ಹೊರಗುತ್ತಿಗೆ ನೌಕರರಾಗಿಯೇ ಕೆಲಸ ಮಾಡುತ್ತಿದ್ದಾರೆ.

ಕೈಗಾ ಅಣುವಿದ್ಯುತ್ ಸ್ಥಾವರ ಯೋಜನೆಯಲ್ಲಿಯೂ ಸಹ ಇದೇ ಪರಿಸ್ಥಿತಿ ಇದ್ದು, ಸ್ಥಳೀಯರಿಗೆ ಕೆಲಸ ಸಿಕ್ಕಿರುವುದು ಕಡಿಮೆ. ಹೀಗಾಗಿ ಮುಂಬರುವ ಯೋಜನೆಗೆ ಸಂಬಂಧಿಸಿ ಸ್ಥಳೀಯರಿಗೆ ಈಗಲೇ ಸೂಕ್ತ ತರಬೇತಿ ಸಿಗುವಂತಾಗಲಿ ಎಂಬುವುದು ಸ್ಥಳೀಯರ ಅಭಿಪ್ರಾಯ.

ಜಿಲ್ಲಾಡಳಿತ ಸಹ ಈ ಹಿಂದೆಯೇ ನಿರುದ್ಯೋಗಿ ಯುವಕ - ಯುವತಿಯರಿಗೆ ಕೌಶಲ್ಯ ತರಬೇತಿಯನ್ನ ಒದಗಿಸಲು ಯೋಜನೆ ಹಾಕಿಕೊಂಡಿತ್ತಾದರೂ ಸೂಕ್ತ ತರಬೇತುದಾರರು ಸ್ಥಳೀಯವಾಗಿ ಲಭ್ಯರಾಗದ್ದರಿಂದ ಹಿನ್ನೆಡೆಯುಂಟಾಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಇದನ್ನೂ ಓದಿ:ಚೀನಾದಿಂದ ಭಾರತಕ್ಕೆ ಜಿಯೋ - ಪೊಲಿಟಿಕಲ್ ಸಮಸ್ಯೆ ತೀವ್ರ: ಶ್ವೇತಭವನದ ಇಂಡೋ-ಪೆಸಿಫಿಕ್ ಸ್ಟ್ರಾಟೆಜಿಕ್ ವರದಿ

For All Latest Updates

TAGGED:

ABOUT THE AUTHOR

...view details