ಕಾರವಾರ: ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದ ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದೇ ದೊಡ್ಡ ಸವಾಲು. ಅದರಲ್ಲಿಯೂ ಸರ್ಕಾರಿ ಯೋಜನೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ನೆಟ್‌ವರ್ಕ್ ಪ್ರಮುಖ ಸಾಧನವಾಗಿದ್ದರೂ ಸಂಪರ್ಕ ಸಾಧ್ಯವಾಗದೆ ಜನ ಪರದಾಡುವಂತಾಗಿದೆ. ಆದರೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರ್ಕಾರ ದೂರಸಂಪರ್ಕ ಇಲಾಖೆಯಿಂದ 232 ಹೊಸ ಮೊಬೈಲ್ ಟವರ್‌ಗಳನ್ನು ಮಂಜೂರು ಮಾಡಲಾಗಿತ್ತಾದರೂ ಇದೀಗ ಈ ಯೋಜನೆಗೂ ವಿಘ್ನ ಎದುರಾಗಿದೆ.
ಹೌದು, ಬಹುಭಾಗ ಅರಣ್ಯ ಪ್ರದೇಶಗಳಿಂದಲೇ ಕೂಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ 232 ಟವರ್ ಮಂಜೂರಿಯಾಗಿತ್ತು. ಈ ಪೈಕಿ 18 ಟವರ್‌ಗಳನ್ನು 2G ಯಿಂದ 3G ಮೇಲ್ದರ್ಜೆಗೆ ಏರಿಸಲಾಗಿದೆ. ಈವರೆಗೂ ಮೊಬೈಲ್ ಸಿಗ್ನಲ್ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಇವುಗಳಲ್ಲಿ ಕಾರವಾರ -8, ಅಂಕೋಲಾ-12, ಜೋಯಿಡಾ- 42, ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ-17, ಶಿರಸಿ-24, ಮುಂಡಗೋಡು- 10 ಹೊಸ ಟವರ್ ನಿರ್ಮಾಣಕ್ಕೆ ಮಂಜೂರು ದೊರಕಿದ ನಂತರ ಜಿಲ್ಲಾಡಳಿತ ಉಚಿತವಾಗಿ ಅರಣ್ಯ ಭೂಮಿಯನ್ನು ಆಯಾ ತಾಲೂಕು ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ 30 ವರ್ಷದ ಲೀಸ್ನೊಂದಿಗೆ ನೀಡಿತ್ತು.
ಮಂಜೂರಾತಿ ಆದೇಶ ಹಿಂಪಡೆದ ಜಿಲ್ಲಾಧಿಕಾರಿ:ಆದರೆ ಇದೀಗ ಅರಣ್ಯ ಕಾಯ್ದೆ ಅಡ್ಡಿಯಾದ್ದರಿಂದ ಮೊದಲ ಹಂತದಲ್ಲಿ ಶಿರಸಿಯ 06 ಹಾಗೂ ಜಿಲ್ಲೆಯ ಒಟ್ಟು 72 ಸ್ಥಳಗಳಲ್ಲಿ ನೀಡಿದ್ದ ಜಾಗದ ಮಂಜೂರಾತಿ ಆದೇಶವನ್ನು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರು ಹಿಂಪಡೆದುಕೊಂಡಿದ್ದಾರೆ. ಇದರಿಂದ ಹಲವು ವರ್ಷದಿಂದ ನೆಟ್‌ವರ್ಕ್ ಸಮಸ್ಯೆ ಎದುರಿಸುತಿದ್ದ ಗ್ರಾಮಗಳಿಗೆ ಟವರ್ ನಿರ್ಮಾಣವಾಗುವ ಮುಂಚೆಯೇ ವಿಘ್ನ ಎದುರಾದಂತಾಗಿದೆ.
ಹೀಗೆ ವಾಪಸ್ ಪಡೆಸ ಜಾಗಗಳ ಪೈಕಿ ಶಿರಸಿಯ ಹುಲೇಕಲ್ ಭಾಗದ-3, ಸಂಪಖಂಡ ಭಾಗದ-2, ಬನವಾಸಿ ಭಾಗದ-1 ಟವರ್‌ಗಳನ್ನು ಜಿಲ್ಲಾಧಿಕಾರಿ ಆದೇಶದಿಂದ ನಿರ್ಮಾಣ ಹಂತದಲ್ಲೇ ಕೈ ಬಿಡಲಾಗಿದೆ. ಇದರಿಂದ ಬಿಎಸ್ಎನ್ಎಲ್ಗೂ ದೊಡ್ಡ ನಷ್ಟ ಎದುರಾಗುವ ಜತೆ ಮೊಬೈಲ್ ನೆಟ್‌ವರ್ಕ್ ಆಗುವ ಆಸೆ ಹೊಂದಿದ್ದ ಜಿಲ್ಲೆಯ ಜನರು ಇದೀಗ ಬೇಸರ ವ್ಯಕ್ತಪಡಿಸುವಂತಾಗಿದೆ.