ಕಾರವಾರ (ಉತ್ತರ ಕನ್ನಡ): ತಮಿಳುನಾಡಿನಲ್ಲಿ ನಡೆದ ನ್ಯಾಷನಲ್ ಅಥ್ಲೆಟಿಕ್ಸ್ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ದನಗರ ಗೌಳಿ ಜನಾಂಗದ ಯುವತಿಯೋರ್ವಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಸಾಧಿಸುವ ಹಟ ಇದ್ದರೆ ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಪ್ರಶ್ನೆ ಅಲ್ಲ ಎಂದು ಸಾಬೀತು ಮಾಡಿದ್ದಾಳೆ.
ತಾಲೂಕಿನ ಚಳಗೇರಿಯ ಗ್ರಾಮದ ನಯನಾ ಕೊಕರೆ ತಮಿಳುನಾಡಿನಲ್ಲಿ ನಡೆದ 20 ವರ್ಷದೊಳಗಿನ ನ್ಯಾಷನಲ್ ಅಥ್ಲೆಟಿಕ್ಸ್ ನಲ್ಲಿ 200 ಮೀಟರ್ ಓಟದಲ್ಲಿ ಪ್ರಥಮ ಹಾಗೂ 100 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಈ ಮೂಲಕ ಜೂನ್ 4 ರಂದು ಕೋರಿಯಾದಲ್ಲಿ ನಡೆಯುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಗೆ ಭಾರತವನ್ನು ಪ್ರತಿನಿಧಿಸುವ ಅರ್ಹತೆ ಪಡೆದುಕೊಂಡಿದ್ದಾಳೆ.
ನಯನಾ ಕಾಡಿನಲ್ಲಿ ವಾಸಿಸುವ ದನಗರ ಗೌಳಿ ಜನಾಂಗದ ಗಂಗಾರಾಮ ಕೊಕರೆ ಮತ್ತು ಗಂಗುಬಾಯಿ ದಂಪತಿ ಪುತ್ರಿಯಾಗಿದ್ದಾಳೆ. ಸ್ವಂತ ಊರು ಚಳಗೇರಿಯಲ್ಲಿಯೇ ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದ ಈಕೆ ಬಳಿಕ ಕಾತೂರಿನ ಪ್ರೌಢಶಾಲೆಯಲ್ಲಿ 8 ಮತ್ತು 9ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಳು. ನಂತರ ಲೊಯೋಲ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿದ್ದಾಳೆ.
7ನೇ ತರಗತಿಯಲ್ಲಿದ್ದಾಗ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ 100ಮೀ., 200ಮೀ., ಮತ್ತು 400ಮೀ. ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಳು. 10ನೇ ತರಗತಿಯಲ್ಲಿ ಓದುತ್ತಿರುವಾಗ ರಾಜ್ಯ ಮಟ್ಟದ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಳು. ಬಾಲ್ಯದಿಂದಲೂ ಅಥ್ಲೆಟಿಕ್ಸ್ನಲ್ಲಿ ತುಂಬಾ ಆಸಕ್ತಿ ಹೊಂದಿದ ನಯನಾ ಪ್ರತಿಭಗೆ ಕಷ್ಟದಲ್ಲಿರುವ ತಂದೆ - ತಾಯಿ ಕೂಡ ಬೆನ್ನೆಲುಬಾಗಿ ನಿಂತಿದ್ದು ಇಂದು ಈ ಸಾಧನೆಗೆ ಸಹಕಾರಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.