ಕರ್ನಾಟಕ

karnataka

ETV Bharat / state

ಕಡಲತೀರದಲ್ಲಿ ಜೋರಾದ ಅಲೆಗಳ ಅಬ್ಬರ: ಮೈಮರೆತರೆ ಪ್ರವಾಸಿಗರ ಜೀವಕ್ಕೆ ಕುತ್ತು - ಗೋಕರ್ಣ

ಮಳೆಗಾಲದಲ್ಲಿ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಇದರಿಂದ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Uttara Kannada tourism
ಕಡಲತೀರದಲ್ಲಿ ಜೋರಾದ ಅಲೆಗಳ ಅಬ್ಬರ

By

Published : Jun 26, 2022, 7:15 PM IST

ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಪ್ರವೇಶಿಸಿದ್ದು ಧಾರಾಕಾರವಾಗಿ ಮಳೆಯಾಗುತ್ತಿದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗುತ್ತಿದೆ. ಅಲೆಗಳ ಅಬ್ಬರ ಹೆಚ್ಚಿರುವ ಸಮಯದಲ್ಲಿ ಪ್ರವಾಸಿಗರು ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿರುತ್ತದೆ. ಅಲ್ಲದೇ ಕೆಂಪು ಬಾವುಟಗಳನ್ನು ನೆಟ್ಟು ಮುಂದೆ ಸಾಗದಂತೆ ಸೂಚನೆಯನ್ನ ಸಹ ನೀಡಿರುತ್ತದೆ. ಇದನ್ನ ಲೆಕ್ಕಿಸದೇ ಮೋಜು ಮಸ್ತಿಗಾಗಿ ಕಡಲಿಗೆ ಇಳಿಯುವ ಪ್ರವಾಸಿಗರು ಅಲೆಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದಾರೆ.

ಇದೇ ರೀತಿ ಕಡಲ ಅಲೆಗಳನ್ನು ಲೆಕ್ಕಿಸದೆ ಕುಮಟಾ ತಾಲೂಕಿನ ಬಾಡದ ಕಾಗಲ್​ದಲ್ಲಿ ನೀರಿಗೆ ಇಳಿದಿದ್ದ ಪ್ರವಾಸಿಗರ ಪೈಕಿ ನಾಲ್ವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ 80ಕ್ಕೂ ಹೆಚ್ಚು ಜನರು ಪ್ರವಾಸಕ್ಕೆ ಬಂದು ಕಡಲತೀರದಲ್ಲಿನ ಸೂಚನೆಗಳನ್ನು ನಿರ್ಲಕ್ಷಿಸಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ಗೋಕರ್ಣ ಮುರಡೇಶ್ವರದಲ್ಲಿಯೂ ನಾಲ್ವರು ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ನಿಟ್ಟಿನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಕಡಲ ತೀರದಲ್ಲಿ ಪ್ರವಾಸಿಗರ ರಕ್ಷಣೆಗೆ ಸ್ಥಳೀಯರ ಆಗ್ರಹ

ಮಾಹಿತಿ ಮತ್ತು ಲೈಫ್ ಗಾರ್ಡ್​ಗಳ ಕೊರತೆ:ಪ್ರವಾಸಕ್ಕೆಂದು ಬರುವವರಿಗೆ ಕಡಲ ತೀರದಲ್ಲಿ ಆದ ಬದಲಾವಣೆಯ ಮಾಹಿತಿ ಸರಿಯಾಗಿ ಇರುವುದಿಲ್ಲ. ಕೆಲ ಪ್ರವಾಸಿಗರಿಗೆ ಅಲೆಗಳ ಅಬ್ಬರ ಹೆಚ್ಚಿರುವ ಬಗ್ಗೆ ತಿಳಿಯದೇ ಮುಂದೆ ಹೋಗಿ ಪ್ರಾಣ ಕಳೆದುಕೊಂಡರೆ, ಇನ್ನೂ ಕೆಲವರು ಮೋಜು ಮಸ್ತಿಗಾಗಿ ಮುಂದೆ ಸಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಡಲ ತೀರದಲ್ಲಿ ಈ ಹಿಂದೆ ಲೈಫ್ ಗಾರ್ಡ್​ಗಳಾಗಿ ಸ್ಥಳೀಯರನ್ನು ನೇಮಕ ಮಾಡಿ ಪ್ರವಾಸಿಗರನ್ನು ರಕ್ಷಿಸುವ ಕಾರ್ಯ ಮಾಡಲಾಗುತ್ತಿತ್ತು. ಆದರೆ ಸದ್ಯ ಲೈಫ್ ಗಾರ್ಡ್​ಗಳ ಸಂಖ್ಯೆ ಕಡಿಮೆ ಇರುವುದರಿಂದ ಜೊತೆಗೆ ಪೊಲೀಸ್ ಸಿಬ್ಬಂದಿ ಕೊರತೆ ಸಹ ಇರುವುದರಿಂದ ಪ್ರವಾಸಿಗರ ಸಾವು ಹೆಚ್ಚಾಗುತ್ತಿದೆ ಎನ್ನುವುದು ಕೆಲವರ ಆರೋಪ.

ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕೇಳಿದರೆ ಈಗಾಗಲೇ ಕಡಲ ತೀರದಲ್ಲಿ ಪ್ರವಾಸಿಗರ ರಕ್ಷಣೆ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ, ಲೈಫ್ ಗಾರ್ಡ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಆದಾಗ್ಯೂ ಸಾವಿನ ಪ್ರಕರಣ ನಡೆಯುತ್ತಿದ್ದು, ಇನ್ನಷ್ಟು ಪ್ರವಾಸಿಗರ ರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.

ಸದ್ಯ ಮಳೆಗಾಲ ಪ್ರಾರಂಭವಾಗಿದ್ದು, ಇನ್ನು ಎರಡು ಮೂರು ತಿಂಗಳುಗಳ ಕಾಲ ಅಲೆಗಳ ಅಬ್ಬರ ಹೆಚ್ಚಾಗಿಯೇ ಇರುತ್ತದೆ. ಅಲ್ಲದೇ ಮಳೆ ಇದ್ದರು ಕಡಲ ತೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸಾವನ್ನ ತಡೆಯುವ ನಿಟ್ಟಿನಲ್ಲಿ ಶೀಘ್ರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ:ಅಪರೂಪದ ಮಾಂಸಾಹಾರಿ ಸಸ್ಯ ಉತ್ತರಾಖಂಡದ ಗೋಪೇಶ್ವರದಲ್ಲಿ ಪತ್ತೆ

ABOUT THE AUTHOR

...view details