ಕಾರವಾರ(ಉತ್ತರಕನ್ನಡ) :ದೇಶದ ಅತೀ ದೊಡ್ಡ ಸೀಬರ್ಡ್ ನೌಕಾನೆಲೆ ಬೃಹತ್ ಯೋಜನೆ ನಿರ್ಮಾಣಕ್ಕೆ ಹಾಲಕ್ಕಿ ಒಕ್ಕಲಿಗರ ಸಮುದಾಯ ಸೇರಿದಂತೆ ಹಲವರು ಸಾವಿರಾರು ಎಕರೆ ಜಮೀನು ಬಿಟ್ಟು ಕೊಟ್ಟಿದ್ದರು.
ಜಮೀನು ಬಿಟ್ಟು ಕೊಡುವ ವೇಳೆ ಸರ್ಕಾರ ಸಂತ್ರಸ್ತರಿಗೆ ಉದ್ಯೋಗದ ಭರವಸೆ ನೀಡಿತ್ತಾದರೂ ಪ್ರಸ್ತುತ ಸಂತ್ರಸ್ತರಿಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡದೇ ಇತರೆ ರಾಜ್ಯದ ಜನರಿಗೆ ಮಣೆ ಹಾಕುತ್ತಿದೆ.
ಇದು ಹಾಲಕ್ಕಿ ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೀಬರ್ಡ್ ನೌಕಾನೆಲೆ ನಿರ್ಮಾಣಕ್ಕೆ ಕಾರವಾರ ಮತ್ತು ಅಂಕೋಲಾದ ಹಾಲಕ್ಕಿ ಒಕ್ಕಲಿಗರು ಸುಮಾರು 2,000ಕ್ಕೂ ಹೆಚ್ಚು ಎಕರೆ ಜಮೀನನ್ನು ನೀಡಿದ್ದಾರೆ.
ಭೂಮಿ ಕೊಟ್ಟು ಉದ್ಯೋಗ ಪಡೆಯದವರ ಅಸಮಾಧಾನ... ಒಂದೆಡೆ ದೇಶ ಹೆಮ್ಮೆ ಪಡುವ ನೌಕಾನೆಲೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಟ್ಟ ಹೆಮ್ಮೆ ಇದ್ದರೆ, ಮತ್ತೊಂದೆಡೆ ತಮ್ಮ ಜಮೀನನ್ನು ಕಳೆದುಕೊಂಡು ಉದ್ಯೋಗವಿಲ್ಲದೇ ಸಂಕಷ್ಟ ಎದುರಿಸುವ ಸ್ಥಿತಿಯೂ ಅವರಿಗೆ ಎದುರಾಗಿದೆ. ಭೂಮಿ ಕಳೆದುಕೊಂಡ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದ ಸರ್ಕಾರ ಪ್ರಸ್ತುತ ತನ್ನ ಮಾತು ತಪ್ಪಿದೆ ಎನ್ನುವ ಆರೋಪವಿದೆ.
ಇದನ್ನೂ ಓದಿ:ನಿವೃತ್ತ ಐಪಿಎಸ್ ಅಧಿಕಾರಿ ನಾರಾಯಣ ಗೌಡ ವಿಧಿವಶ
ಇಷ್ಟು ದಿನಗಳ ಕಾಲ ತಮಗೆ ಉದ್ಯೋಗ ದೊರೆಯುತ್ತದೆ ಎಂದು ಕಾದು ಕುಳಿತಿದ್ದ ಸಂತ್ರಸ್ತರು ತಮಗೆ ಮೋಸವಾಗಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದು, ಉದ್ಯೋಗಕ್ಕಾಗಿ ಇದೀಗ ಹಾಲಕ್ಕಿ ಸಮುದಾಯದ ಜನರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಹೋರಾಟದ ಎಚ್ಚರಿಕೆ :ಹಾಲಕ್ಕಿ ಒಕ್ಕಲಿಗ ಸಮುದಾಯದ ಜನರು ಹೇಳುವಂತೆ, ಭೂಮಿ ಕಳೆದುಕೊಂಡ ನಮಗೆ ಅಲ್ಲಿ ಮೊದಲ ಪ್ರಾಶಸ್ತ್ಯ ಕೊಡಬೇಕು. ಅದನ್ನು ಬಿಟ್ಟು ಬೇರೆ ಬೇರೆ ರಾಜ್ಯದ ಜನರಿಗೆ ಉದ್ಯೋಗ ಕಲ್ಪಿಸುತ್ತಿದ್ದಾರೆ. ಇದು ಎಂತಹ ನ್ಯಾಯ? ಭೂಮಿ ತೆಗೆದುಕೊಳ್ಳಬೇಕಾದರೆ ಪ್ರತಿ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗದ ಭರವಸೆ ನೀಡಿದ್ದರು.
ಆದರೆ, ಅದನ್ನು ಈಡೇರಿಸಿಲ್ಲ. ಉದ್ಯೋಗಕ್ಕಾಗಿ ಸತತ 20 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೂ ನಮಗೆ ನ್ಯಾಯ ಸಿಗುತ್ತಿಲ್ಲ. ಜೊತೆಗೆ ಪರಿಶಿಷ್ಟ ಪಂಗಡ ಮೀಸಲಾತಿಗೆ ನಮ್ಮ ಸಮುದಾಯದವರು ನಲವತ್ತು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.
ನಮಗೆ ಅಲ್ಲೂ ಸರ್ಕಾರ ನ್ಯಾಯ ಕೊಡುತ್ತಿಲ್ಲ. ಇನ್ನು ನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸರ್ಕಾರ ಎಚ್ಚೆತ್ತು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ನಮ್ಮ ಹಕ್ಕಿಗಾಗಿ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಸಂತ್ರಸ್ತರು ಎಚ್ಚರಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ