ಶಿರಸಿ:ತೀವ್ರ ಕುತೂಹಲ ಕೆರಳಿಸಿದ್ದ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ (ಕೆಡಿಸಿಸಿ) ಚುನಾವಣೆಯಲ್ಲಿ ಹೊಸ ಮುಖಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಿದ್ದು, ಘಟಾನುಘಟಿ ಸಹಕಾರಿಗಳು ಸೋಲನ್ನು ಅನುಭವಿಸಿದ್ದಾರೆ.
ಆಡಳಿತ ಮಂಡಳಿಯ ಒಟ್ಟು 16 ನಿರ್ದೇಶಕ ಸ್ಥಾನದಲ್ಲಿ 6 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 10 ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಈ ಹಿಂದಿನ ನಿರ್ದೇಶಕರಾದ ಜಿ.ಆರ್.ಹೆಗಡೆ ಸೋಂದಾ, ಶಿವಾನಂದ ಕಡತೋಕ, ಷಣ್ಮುಖ ಗೌಡ, ಮೋಹನದಾಸ ನಾಯಕ ಆಯ್ಕೆಯಾಗಿದ್ದು, ಹೊಸಬರಾದ ರಾಮಕೃಷ್ಣ ಹೆಗಡೆ ಕಡವೆ, ಗಜು ಪೈ, ಬೀರಣ್ಣ ನಾಯಕ, ಎಲ್.ಟಿ.ಪಾಟೀಲ್, ಸುರೇಶ್ಚೇಂದ್ರ ಹೆಗಡೆ, ವಿಶ್ವನಾಥ ಭಟ್ಟ ನೂತನವಾಗಿ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ:
ಕಾರವಾರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಪ್ರಕಾಶ ಗುನಗಿ ಅವಿರೋಧ, ಯಲ್ಲಾಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಸಚಿವ ಶಿವರಾಮ ಹೆಬ್ಬಾರ್. ಹಳಿಯಾಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ನಿಕಟಪೂರ್ವ ಅಧ್ಯಕ್ಷ ಎಸ್ ಎಲ್ ಘೋಟ್ನೇಕರ್. ಭಟ್ಕಳ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಮಂಕಾಳು ವೈದ್ಯ. ಜೋಯಿಡಾ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಕೃಷ್ಣ ದೇಸಾಯಿ. ತಾಲೂಕಾ ಒಕ್ಕಲುತನ ಹುಟ್ಟುವಳಿಗಳ ಮಾರಾಟ ಸಹಕಾರಿ ಸಂಘಗಳ ಮತಕ್ಷೇತ್ರದಿಂದ ಆರ್ ಎಮ್ ಹೆಗಡೆ ಸಿದ್ದಾಪುರ ಅವಿರೋಧ ಆಯ್ಕೆಯಾಗಿದೆ.
ಘಟಾನುಘಟಿ ಅಭ್ಯರ್ಥಿಗಳಿಗೆ ಸೋಲು:
ಸಹಕಾರಿ ರತ್ನ ಪುರಸ್ಕೃತ, ಬ್ಯಾಂಕಿನ ಮಾಜಿ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ, 2 ಬಾರಿಯ ಕೆಡಿಸಿಸಿ ನಿರ್ದೇಶಕ ಶ್ರೀಧರ ಭಾಗ್ವತ್, 3 ಬಾರಿ ಉಪಾಧ್ಯಕ್ಷರಾಗಿ, 6 ಬಾರಿ ನಿರ್ದೇಶಕರಾಗಿದ್ದ ಭಾಸ್ಕರ ಹೆಗಡೆ ಕಾಗೇರಿ, ನಿಕಟಪೂರ್ವ ನಿರ್ದೇಶಕ ವಿಜಯಕುಮಾರ ನಾಯಕರಂತಹ ಘಟನುಘಟಿಗಳು ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದಾರೆ.