ಕರ್ನಾಟಕ

karnataka

ETV Bharat / state

ಜನತಾ ದರ್ಶನಕ್ಕೆ ಸರ್ಕಾರಿ ಬಸ್​ನಲ್ಲಿ ಟಿಕೆಟ್ ಪಡೆದು ಪ್ರಯಾಣಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ - ​ ETV Bharat Karnataka

ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಆರ್​.ಮಾನಕರ್ ಅವರು ಶಕ್ತಿ ಯೋಜನೆಯ ಸೌಲಭ್ಯ ಪಡೆಯದೆ ಟಿಕೆಟ್ ದರ ಪಾವತಿಸಿದ್ದು, ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಆರ್​.ಮಾನಕರ್
ಉತ್ತರಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಆರ್​.ಮಾನಕರ್

By ETV Bharat Karnataka Team

Published : Oct 10, 2023, 10:53 PM IST

ಕಾರವಾರ (ಉತ್ತರ ಕನ್ನಡ) :ಅನಾವಶ್ಯಕ ದುಂದು ವೆಚ್ಚ ತಪ್ಪಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಒಳ್ಳೆಯ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ ಹಾಗೂ ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆ ನಡೆಯುವ ಜನತಾ ದರ್ಶನಕ್ಕೆ ತೆರಳುವ ಅಧಿಕಾರಿಗಳಿಗೆ ಸರ್ಕಾರಿ ಬಸ್​ನಲ್ಲಿಯೇ ತೆರಳಲು ಸೂಚಿಸಿದ್ದು, ಸ್ವತಃ ಜಿಲ್ಲಾಧಿಕಾರಿ ಗಂಗೂಬಾಯಿ ಆರ್​.ಮಾನಕರ್ ಮಂಗಳವಾರ ಜನತಾ ದರ್ಶನಕ್ಕೆ ವಿಶೇಷ ಬಸ್​ನಲ್ಲಿ ಟಿಕೆಟ್ ಪಡೆದು ಸಂಚರಿಸಿ ಮಾದರಿಯಾದರು.

ಜಿಲ್ಲಾಧಿಕಾರಿ ಅವರೊಂದಿಗೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಸರ್ಕಾರಿ ಬಸ್ ಮೂಲಕ ತೆರಳಿದ್ದು, ಜಿಲ್ಲಾಧಿಕಾರಿ ಮತ್ತು ಪುರುಷ ಅಧಿಕಾರಿಗಳು ಬಸ್ ಟಿಕೆಟ್ ದರ ಪಾವತಿಸಿದರೆ, ಮಹಿಳಾ ಅಧಿಕಾರಿಗಳು ಶಕ್ತಿ ಯೋಜನೆಯ ಸೌಲಭ್ಯ ಪಡೆದುಕೊಂಡರು. ಸರ್ಕಾರಕ್ಕೆ ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಪರಿಸರ ಮಾಲಿನ್ಯ ಕಡಿಮೆ ಮಾಡುವ ಸಲುವಾಗಿ ಎಲ್ಲಾ ಅಧಿಕಾರಿಗಳು ತಮ್ಮ ಸರಕಾರಿ ವಾಹನವನ್ನು ಉಪಯೋಗಿಸದೇ, ಸರ್ಕಾರಿ ಬಸ್ ಮೂಲಕವೇ ಪ್ರಯಾಣಿಸಿದರು.

ಬಸ್‌ನಲ್ಲಿ ಸಂಚರಿಸುವ ಮೂಲಕ ಪ್ರತಿದಿನ ಬಸ್ ಮೂಲಕ ಕಚೇರಿಗಳಿಗೆ ಆಗಮಿಸಿ ವಿವಿಧ ಸಮಸ್ಯೆಗೆ ಪರಿಹಾರ ಕೋರುವ ನಾಗರಿಕರ ಕಷ್ಟ ಅಧಿಕಾರಿಗಳಿಗೆ ತಿಳಿಯಲಿದೆ. ಅಲ್ಲದೆ ಎಲ್ಲಾ ಅಧಿಕಾರಿಗಳು ಒಂದೇ ವಾಹನದಲ್ಲಿ ಪ್ರಯಾಣಿಸುವ ಮೂಲಕ ಪರಸ್ಪರ ವಿವಿಧ ಇಲಾಖಾ ಸಮಸ್ಯೆಗಳನ್ನು ಸಮನ್ವಯದ ಮೂಲಕ ಬಗೆಹರಿಸಿಕೊಳ್ಳಲು ಕೂಡಾ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇನ್ನು ಬನವಾಸಿಯಲ್ಲಿ ಜನತಾ ದರ್ಶನದ ವೇಳೆ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಬನವಾಸಿ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಅತಿಕ್ರಮಣ ಪೂರ್ವ ಜಮೀನು ಕುರಿತ ಸಮಸ್ಯೆಗೆ ಒಂದು ತಿಂಗಳಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿನ ಪ್ರಮುಖ ಸಮಸ್ಯೆಯಾದ ಅತಿಕ್ರಮಣ ಪೂರ್ವ ಜಮೀನು ಸಮಸ್ಯೆ ಕುರಿತು ಸರ್ಕಾರಕ್ಕ್ಕೆ ಪತ್ರ ಬರೆಲಾಗಿದ್ದು, ಒಂದು ತಿಂಗಳ ಒಳಗೆ ಇದಕ್ಕೆ ಸೂಕ್ತ ಪರಿಹಾರ ದೊರೆಯಲಿದ್ದು, ಸಾಗುವಾಳಿದಾರರಿಗೆ ಹಕ್ಕುಪತ್ರ ನೀಡಲಾಗುವುದು ಎಂದರು.

ಖಾಯಂ ಲಾಗಣಿ ಸಮಸ್ಯೆ ಕುರಿತಂತೆ ವಾಸ್ತವಿಕ ಸಮಸ್ಯೆಗಳ ಬಗ್ಗೆ ಅರಣ್ಯ ಮತ್ತು ಕಂದಾಯ ಇಲಾಖೆ ಮೂಲಕ ಜಂಟಿ ಸ್ಥಳ ಪರಿಶೀಲನೆ ನಡೆಸಿ, ಅರಣ್ಯ ಇಲಾಖೆ ಸಮನ್ವಯದೊಂದಿಗೆ ಭೂ ಮಾಲೀಕರಿಗೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುವುದು. ಬನವಾಸಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಶೀಘ್ರದಲ್ಲೇ ದೊರೆಯಲು ಅನುಕೂಲವಾಗುವಂತೆ ಅಗತ್ಯವಿರುವ ಕಡೆಗಳಲ್ಲಿ ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ಡಿಸಿ ಭರವಸೆ ನೀಡಿದರು.

ಜನತಾ ದರ್ಶನದಲ್ಲಿ ರಸ್ತೆ ಅತಿಕ್ರಮಣ, ಕಂದಾಯ ಇಲಾಖೆ ಸಮಸ್ಯೆಗಳು, ಕುಡಿಯುವ ನೀರು ಮುಂತಾದ 165 ಕ್ಕೂ ಅಧಿಕ ದೂರುಗಳು ಸಲ್ಲಿಕೆಯಾಗಿದ್ದು, ಈ ಎಲ್ಲಾ ದೂರುಗಳನ್ನು IPGRS ಪೋರ್ಟಲ್‌ನಲ್ಲಿ ಅಳವಡಿಸಿದ್ದು, ಈ ದೂರುಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ನೇರವಾಗಿ ಅರ್ಜಿದಾರರಿಗೆ ಮಾಹಿತಿ ಸಲ್ಲಿಕೆಯಾಗಲಿದೆ.

ಇದನ್ನೂ ಓದಿ :ಜನತಾದರ್ಶನ ಕಾರ್ಯಕ್ರಮಕ್ಕೆ ಫ್ರೀ ಬಸ್ ಮೂಲಕ ಪ್ರಯಾಣಿಸಿದ ಬಾಗಲಕೋಟೆ ಡಿಸಿ- ವಿಡಿಯೋ

ABOUT THE AUTHOR

...view details