ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿವರ್ಷ ಸುರಿಯುವ ಮಳೆ ನೆರೆ ಅವಾಂತರ ಸೃಷ್ಟಿಸುತ್ತಿದ್ದು, ಕೋಟ್ಯಂತರ ರೂ. ಹಾನಿ ಸಂಭವಿಸುತ್ತಿದೆ. ಅಲ್ಲದೇ, ಜನರ ಜೀವನದ ಮೇಲೆ ಸಹ ಇದು ಪರಿಣಾಮ ಬೀರುವ ಹಿನ್ನೆಲೆ ಪ್ರಕೃತಿ ವಿಕೋಪದ ಮೇಲೆ ಕಣ್ಣಿಡಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
2019ರಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ನೆರೆ ಅವಾಂತರ ಸೃಷ್ಟಿಯಾಗಿತ್ತು. ಕಳೆದ ವರ್ಷ ಸಹ ಜಿಲ್ಲೆಯ ಕೆಲವೆಡೆ ನೆರೆ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ವರ್ಷವೂ ಸಹ ಅನೇಕ ಕಡೆ ಭೂಕುಸಿತ ಉಂಟಾಗಿದ್ದು, ಸಾಕಷ್ಟು ಪ್ರಮಾಣದ ಹಾನಿಗೆ ಕಾರಣವಾಗಿತ್ತು. ಪ್ರತಿವರ್ಷ ಒಂದಿಲ್ಲೊಂದು ಅವಾಂತರಗಳು ಎದುರಾಗುತ್ತಿರುವುದರಿಂದ ಜನರಲ್ಲಿ ಭಯ ಆವರಿಸಿದೆ. ಈ ನಿಟ್ಟಿನಲ್ಲಿ ಇದೀಗ ಪ್ರಾಕೃತಿಕ ವಿಕೋಪಗಳನ್ನ ತಂತ್ರಜ್ಞಾನಗಳ ಮೂಲಕ ನಿರ್ವಹಣೆ ಮಾಡಲು ಉತ್ತರಕನ್ನಡ ಜಿಲ್ಲಾಡಳಿತ ಮುಂದಾಗಿದೆ.
ಪ್ರಾಕೃತಿಕ ವಿಕೋಪಗಳ ನಿರ್ವಹಣೆ ತಂಡ ನಿಯೋಜನೆ:
ಹೌದು, ಜಿಲ್ಲೆಯಲ್ಲಿ 5 ಜಲಾಶಯಗಳಿದ್ದು, ಒಂದು ಅಣು ವಿದ್ಯುತ್ ಉತ್ಪಾದನಾ ಕೇಂದ್ರ ಸಹ ಇದೆ. ಪಶ್ಟಿಮ ಘಟ್ಟಗಳಿಂದಾಗಿ ಗುಡ್ಡಗಾಡುಗಳಿಂದ ಕೂಡಿರುವ ಜಿಲ್ಲೆ ಇದಾಗಿದ್ದು, ನದಿ ತೀರ ಹಾಗೂ ಗುಡ್ಡಗಳಿಗೆ ಹೊಂದಿಕೊಂಡು ಬಹುತೇಕ ಕಡೆ ಜನವಸತಿ ಪ್ರದೇಶಗಳಿವೆ. ಪ್ರಾಕೃತಿಕ ವಿಕೋಪಗಳು ಸಂಭವಿಸುವ ಪೂರ್ವದಲ್ಲಿಯೇ ಅವುಗಳ ತೀವ್ರತೆಯನ್ನ ಕಂಡುಕೊಂಡರೆ ಮುಂದೆ ಉಂಟಾಗುವ ಹೆಚ್ಚಿನ ಹಾನಿಯನ್ನ ತಪ್ಪಿಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪಗಳ ನಿರ್ವಹಣೆ ತಂಡವೊಂದನ್ನ ನಿಯೋಜಿಸಲಾಗಿದ್ದು, ಈ ತಂಡ ತಂತ್ರಜ್ಞಾನ ಬಳಸಿಕೊಂಡು ವಿಕೋಪಗಳ ಮೇಲೆ ನಿಗಾ ಇರಿಸುತ್ತದೆ. ಇದರಿಂದಾಗಿ ಹಾನಿ ಸಂಭವಿಸಬಹುದಾದ ಪ್ರದೇಶಗಳಿಗೆ ಮಾಹಿತಿ ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸುವ ಪ್ಲಾನ್ ಜಿಲ್ಲಾಡಳಿತದ್ದಾಗಿದೆ.