ಕರ್ನಾಟಕ

karnataka

ETV Bharat / state

ಕಿತ್ತೂರು ಕರ್ನಾಟಕಕ್ಕೆ ಉತ್ತರಕನ್ನಡ ಸೇರ್ಪಡೆ: ಸ್ಥಳೀಯರ ಆತಂಕವೇನು? - ಸಹ್ಯಾದ್ರಿ ಕರ್ನಾಟಕ

ಹೈದ್ರಾಬಾದ್ ಕರ್ನಾಟಕ ಭಾಗವನ್ನು ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ (Kalyana Karnataka) ಎಂದು ಮರು ನಾಮಕರಣ ಮಾಡಿತ್ತು. ಇದರ ಬೆನ್ನಲ್ಲೇ ಮುಂಬೈ ಕರ್ನಾಟಕ (Mumbai Karnataka) ಭಾಗಕ್ಕೆ ಸೇರಿರುವ ಏಳು ಜಿಲ್ಲೆಗಳನ್ನ ಕಿತ್ತೂರು ಕರ್ನಾಟಕ (Kittur Karnataka) ಎಂದು ಮರುನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಆದರೆ ಕಿತ್ತೂರು ಕರ್ನಾಟಕ ಭಾಗಕ್ಕೆ ಉತ್ತರ ಕನ್ನಡ ಜಿಲ್ಲೆಯನ್ನ ಸೇರ್ಪಡೆ ಮಾಡಿರುವುದು ಇದೀಗ ಜಿಲ್ಲೆಯ ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಉತ್ತರ ಕನ್ನಡ
Uttara Kannada

By

Published : Nov 11, 2021, 4:33 PM IST

ಕಾರವಾರ: ಮುಂಬೈ ಕರ್ನಾಟಕ (Mumbai Karnataka) ಎಂದು ಕರೆಯುತ್ತಿದ್ದ ಏಳು ಜಿಲ್ಲೆಗಳನ್ನು ಕಿತ್ತೂರು ಕರ್ನಾಟಕ (Kittur Karnataka) ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಸಚಿವ ಸಂಪುಟದಲ್ಲಿ ಈ ಸಂಬಂಧ ಒಪ್ಪಿಗೆಯನ್ನು ಸಹ ಪಡೆಯಲಾಗಿದ್ದು, ಕಿತ್ತೂರು ಕರ್ನಾಟಕಕ್ಕೆ ಉತ್ತರ ಕನ್ನಡ ಜಿಲ್ಲೆ ಸೇರಿಸಿರುವುದು ಜಿಲ್ಲೆಯ ಜನರ ಗೊಂದಲಕ್ಕೆ ಕಾರಣವಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆ (Uttara Kannada District) ಕಿತ್ತೂರು ಕರ್ನಾಟಕಕ್ಕೆ ಸೇರಿರುವ ಬೇರೆಲ್ಲಾ ಜಿಲ್ಲೆಗಳಿಗಿಂದ ಭೌಗೋಳಿಕವಾಗಿ ವಿಭಿನ್ನವಾಗಿದೆ. ಇದು ಕರಾವಳಿ ಭಾಗವನ್ನ ಹೊಂದಿರುವ ಜಿಲ್ಲೆಯಾಗಿದ್ದು, ಕರಾವಳಿ ಕರ್ನಾಟಕ ಎಂದು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡವನ್ನು ಸೇರಿಸಬೇಕಿತ್ತು. ಅದನ್ನು ಬಿಟ್ಟು ಸರ್ಕಾರ, ಕಿತ್ತೂರು ಕರ್ನಾಟಕ ಭಾಗಕ್ಕೆ ಉ.ಕ ಸೇರಿಸಿರುವುದು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎನ್ನುವ ಆರೋಪ ಕೇಳಿ ಬಂದಿದೆ.


ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಘೋಷಣೆ ಮಾಡುವ ಯೋಜನೆಗಳು ಕರಾವಳಿ ಭಾಗ ಎನ್ನುವ ಕಾರಣಕ್ಕೆ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಾಗಿ ಸಿಗುವುದಿಲ್ಲ. ಇನ್ನು ಕರಾವಳಿ ಭಾಗಕ್ಕೆ ಬರುವ ಯೋಜನೆಗಳು ಸಹ ಸರಿಯಾಗಿ ಜಿಲ್ಲೆಗೆ ತಲುಪುವುದಿಲ್ಲ. ಇದರ ನಡುವೆ ಕಿತ್ತೂರು ಕರ್ನಾಟಕಕ್ಕೆ ಉ.ಕ ಸೇರಿಸುವುದರಿಂದ ಜಿಲ್ಲೆ ಯಾವ ಭಾಗಕ್ಕೆ ಸೇರಿದೆ ಎನ್ನುವ ಗೊಂದಲ ಎಲ್ಲರಲ್ಲಿ ಕಾಡತೊಡಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ.

ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಆದರೆ ಉಳಿದ ಆರು ಜಿಲ್ಲೆಗಳಿಗಿಂತ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ವಿಭಿನ್ನವಾಗಿದೆ. ಕರಾವಳಿ ಹಂಚಿಕೊಂಡಿರುವುದರಿಂದ ಸರ್ಕಾರ ಕರಾವಳಿ ಕರ್ನಾಟಕ ಎಂದು ಘೋಷಣೆ ಮಾಡಲಿ ಎನ್ನುವುದು ಸ್ಥಳೀಯರ ಆಗ್ರಹ.

ಇನ್ನೊಂದೆಡೆ, ಸರ್ಕಾರದ ನಿರ್ಧಾರಕ್ಕೆ ಕೆಲವರು ಮೆಚ್ಚುಗೆಯನ್ನ ಸಹ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹಲವು ದಿನಗಳ ಕನಸಾಗಿರುವ ರೈಲ್ವೆ ಯೋಜನೆ, ಬಂದರು ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಹಾಗೆಯೇ ಉಳಿದಿದ್ದು, ಸರ್ಕಾರ ಇದರ ಕಡೆ ಒತ್ತು ಕೊಡಲಿ ಎನ್ನುವುದು ಸ್ಥಳೀಯರ ಬಯಕೆ.

ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಭಾಗ ಒಂದು ಕಡೆಯಾದ್ರೆ ಜಿಲ್ಲೆಯ ಘಟ್ಟದ ಮೇಲಿನ ಕೆಲ ತಾಲೂಕುಗಳು ಮಲೆನಾಡು ಭಾಗಕ್ಕೆ ಸಹ ಸೇರಿದೆ. ಈ ನಿಟ್ಟಿನಲ್ಲಿ ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಸಹ್ಯಾದ್ರಿ ಕರ್ನಾಟಕ (Sahyadri Karnataka) ಎಂದು ಸರ್ಕಾರ ಹೆಸರಿಡಲಿ ಎನ್ನುವುದು ಕೆಲವರ ಒತ್ತಾಯ.

ABOUT THE AUTHOR

...view details