ಕರ್ನಾಟಕ

karnataka

ETV Bharat / state

ಗದ್ದೆಗಿಳಿದು ಭತ್ತ ನಾಟಿ ಮಾಡಿದ ಉತ್ತರಕನ್ನಡ ಡಿಸಿ.. ಜನರಿಂದ ಬಹುಪರಾಕ್​ - Uttara Kannada dc agriculture work

ಯುವಕರನ್ನು ಕೃಷಿಗೆ ಸೆಳೆಯುವ ಯತ್ನ- ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಭತ್ತ ನಾಟಿ ಮಾಡಿದ ಉತ್ತರ ಕನ್ನಡ ಡಿಸಿ- ಗಮನ ಸೆಳೆದ ಜಿಲ್ಲಾಧಿಕಾರಿ

Uttara Kannada dc worked in farm land
ಗದ್ದೆಗಿಳಿದು ಕೃಷಿ ಕೆಲಸ ಮಾಡಿದ ಉತ್ತರಕನ್ನಡ ಡಿಸಿ

By

Published : Jul 31, 2022, 7:54 PM IST

ಕಾರವಾರ: ಕೃಷಿ ಚಟುವಟಿಕೆಗೆ ಉತ್ತೇಜನ ನೀಡಲು ಮತ್ತು ಯುವ ಜನತೆಯನ್ನು ಕೃಷಿಯತ್ತ ಸೆಳೆಯುವ ನಿಟ್ಟಿನಲ್ಲಿ ಸ್ವತಃ ಜಿಲ್ಲಾಧಿಕಾರಿಗಳೇ ಭತ್ತದ ಗದ್ದೆಯಲ್ಲಿ ಭತ್ತ ನಾಟಿ ಮಾಡುವ ಮೂಲಕ ಮಾದರಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

ಯುವಕರನ್ನು ಕೃಷಿಗೆ ಸೆಳೆಯುವ ನಿಟ್ಟಿನಲ್ಲಿ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದಲ್ಲಿ ಅಂಕೋಲಾ ಬೆಳೆಗಾರರ ಸಂಘದ ವತಿಯಿಂದ ಭತ್ತದ ಸಸಿ ನಾಟಿ ಮಾಡುವ(ಕೃಷಿ ಉತ್ತೇಜನ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉತ್ತರ ಕನ್ನಡ ಡಿಸಿ ಮುಲೈ ಮುಹಿಲನ್ ತಾವು ಯಾವ ರೈತರಿಗೂ ಕಮ್ಮಿ‌ ಇಲ್ಲವೆಂಬಂತೆ ಭತ್ತದ ಗದ್ದೆಗಿಳಿದು ಸಸಿ ನಾಟಿ ಮಾಡಿದರು. ಕೆಲ ಕಾಲ ಎತ್ತಿನ ಜೋಡಿಯಲ್ಲಿ ನೇಗಿಲು ಹಿಡಿದು ಭೂಮಿಯನ್ನು ಉಳುಮೆಯನ್ನ ಮಾಡಿದರು.

ಗದ್ದೆಗಿಳಿದು ಕೃಷಿ ಕೆಲಸ ಮಾಡಿದ ಡಿಸಿ

ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಕಳೆದ ಕೆಲ ವರ್ಷಗಳಿಂದ ಪ್ರತಿ ಬಾರಿಯೂ ಪ್ರವಾಹ ಸೃಷ್ಟಿಯಾಗುತ್ತಿದ್ದ ಹಿನ್ನೆಲೆಯಲ್ಲಿ ನದಿ ತಟದ ಒಂದಿಷ್ಟು ರೈತರು ಕೃಷಿಯನ್ನೇ ಬಿಟ್ಟಿದ್ದಾರೆ.‌ ಆದರೆ ಇಂದಿನ ತಂತ್ರಜ್ಞಾನವನ್ನು ಬಳಸಿ ಹೇಗೆ ಕೃಷಿ ಮಾಡಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿ ಉತ್ತಮ ಸಂದೇಶ ಸಾರಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಜೊತೆಗೆ ಅಡ್ಲೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದವರನ್ನು ಕೃಷಿ ಚಟುವಟಿಕೆಯತ್ತ ಸೆಳೆಯುವ ನಿಟ್ಟಿನಲ್ಲಿ ಅಂಕೋಲಾ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಗದ್ದೆನಾಟಿ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನಾದರೂ ಯುವ ಸಮುದಾಯ ಮುಂದಿನ ದಿನದಲ್ಲಿ ಈ ಭಾಗದಲ್ಲಿ ಪಾಳು ಬಿಟ್ಟ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡುವ ಮೂಲಕ ಫಸಲು ಬರುವಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ:ಮೈಸೂರಲ್ಲಿ ದನಗಾಹಿ ಮೇಲೆ ಹುಲಿ ದಾಳಿ.. ವ್ಯಕ್ತಿ, ಜಾನುವಾರು ಕೊಂದುಹಾಕಿದ ಟೈಗರ್​

ಡಿಸಿ ಮುಲೈ ಮುಹಿಲನ್ ಮಾತನಾಡಿ, ಭತ್ತ ನಾಟಿ ಮಾಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಬಹಳ ಸಂತೋಷ ಆಗಿದೆ. ಕೃಷಿ ಕೆಲಸ, ರೈತರ ಸಂಕಷ್ಟ ಎಲ್ಲವನ್ನೂ ಯುವಕರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನವನ್ನು ಈ ಕಾರ್ಯಕ್ರಮದ ಮೂಲಕ ಮಾಡಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಪ್ರಯತ್ನಕ್ಕೆ ನನ್ನ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಬೆಳೆಗೆ ಉತ್ತಮ ಬೆಲೆ ಸಿಗುವ ಯೋಜನೆಗಳನ್ನು ಜಿಲ್ಲಾಡಳಿತ ವತಿಯಿಂದ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸ್ಥಳೀಯರು ಮಾತನಾಡಿ, ಕೃಷಿ ಉತ್ತೇಜನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರಸ್ತುತ ದಿನಗಳಲ್ಲಿ ಭತ್ತ ಬೆಳೆ ಬೆಳೆಯೋದು ಸುಲಭದ ಕೆಲಸವಲ್ಲ. ಖರ್ಚು ವೆಚ್ಚ ಹೆಚ್ಚು. ಹಾಗಾಗಿ ಸರ್ಕಾರದ ಗಮನ ಸೆಳೆಯಲೆಂದು ಜಿಲ್ಲಾಧಿಕಾರಿಯವರನ್ನೇ ಕರೆಸಿ ಈ ಕಾರ್ಯಕ್ರಮ ಮಾಡಿದ್ದೇವೆ. ಕೃಷಿ ಕೆಲಸ ಉನ್ನತ, ಶ್ರೇಷ್ಠ ಕೆಲಸ ಎಂಬುದನ್ನು ಜಿಲ್ಲಾಧಿಕಾರಿ ಸ್ವತಃ ಗದ್ದೆಗಿಳಿದು ತೋರಿಸಿಕೊಟ್ಟಿದ್ದಾರೆ ಎಂದರು.

ABOUT THE AUTHOR

...view details