ಕಾರವಾರ:ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಹಾನಿಗೊಳಗಾದ ಗಂಗಾವಳಿ ತೀರದ ಪ್ರದೇಶಗಳಿಗೆ ಹಾಗೂ ಗುಡ್ಡ ಕುಸಿತಕ್ಕೊಳಗಾದ ಯಲ್ಲಾಪುರದ ಕಳಚೆ ಗ್ರಾಮಕ್ಕೆ ಭೇಟಿ ನೀಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸಂತ್ರಸ್ತರ ಗೋಳು ಆಲಿಸಿದ್ದಾರೆ.
ಅಂಕೋಲಾ ತಾಲೂಕಿನ ಗಂಗಾವಳಿ ನದಿ ತೀರದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳೊಂದಿಗೆ ತೆರಳಿ ಗುಳ್ಳಾಪುರ-ಹಳವಳ್ಳಿ ಸೇತುವೆ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳೀಯರಿಂದ ಹಾನಿಗೊಳಗಾದ ಗ್ರಾಮಗಳ ಬಗ್ಗೆ ಮಾಹಿತಿ ಪಡೆದು ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಪ್ರವಾಹಪೀಡಿತ ಪ್ರದೇಶಕ್ಕೆ ಡಿಸಿ ಭೇಟಿ ಅಲ್ಲದೆ ಕಳೆದ ಬಾರಿ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿದ್ದರೂ ಈವರೆಗೂ ಪರಿಹಾರ ದೊರಕದ ಬಗ್ಗೆ ಜಿಲ್ಲಾಧಿಕಾರಿ ಬಳಿ ಗಮನಕ್ಕೆ ತಂದಾಗ, ತಕ್ಷಣ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು. ಇದೇ ವೇಳೆ ಜಿಲ್ಲಾಧಿಕಾರಿ ಅವರ ವಾಹನವನ್ನು ಅಡ್ಡಗಟ್ಟಿ ಸ್ಥಳೀಯ ಮಹಿಳೆಯರು ಮನೆ ಅಂಗಡಿಗಳು ಕೊಚ್ಚಿ ಹೋಗಿರುವ ಬಗ್ಗೆ ದೂರು ನೀಡಿದರು. ಅತಿಕ್ರಮಣದಾರರು ಎಂದು ಪರಿಹಾರ ನೀಡುತ್ತಿಲ್ಲ. ನಾವು ಹಲವು ವರ್ಷಗಳಿಂದ ವಾಸವಾಗಿದ್ದು ಸರ್ವೆ ಸಹ ನಡೆಸಲಾಗಿದೆ. ಇಷ್ಟಾದರೂ ಕೂಡ ವಂಚನೆ ಮಾಡಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಅರ್ಜಿಯನ್ನು ಈಗಾಗಲೇ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಮಟ್ಟದಲ್ಲಿ ಇದೆಲ್ಲಾ ಆಗಬೇಕಾಗಿದ್ದು ಈ ಬಗ್ಗೆ ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಗುಡ್ಡ ಕುಸಿತದಿಂದ ಊರಿಗೆ ಊರೇ ಮಣ್ಣು ತುಂಬಿಕೊಂಡಿರುವ ಯಲ್ಲಾಪುರದ ಕಳಚೆ ಗ್ರಾಮಕ್ಕೆ ಕಾಲ್ನಡಿಗೆ ಹಾಗೂ ಸ್ಥಳೀಯರ ಬೈಕ್ ಏರಿ ಜಿಲ್ಲಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. ಸಮಸ್ಯೆಗೊಳಗಾದ ಸ್ಥಳೀಯರಿಂದ ಮಾಹಿತಿ ಪಡೆದ ಡಿಸಿ ಮುಲ್ಲೈ ಮುಹಿಲನ್ ಗುಡ್ಡ ಕುಸಿತದಿಂದಾಗಿ ಸಮಸ್ಯೆಯಾದವರಿಗೆ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.