ಕಾರವಾರ:ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿರುವ ಜನತಾ ಕರ್ಪ್ಯೂಗೆ ಜಿಲ್ಲೆಯ ಜನರು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಲ್ಲ ರೀತಿಯ ಸೇವೆಗಳು ಸ್ಥಗಿತಗೊಳ್ಳಲಿವೆ. ಜಿಲ್ಲೆಯ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್ಪೋಸ್ಟ್ಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ. ಜನರು ನಿತ್ಯದ ಅವಶ್ಯಕ ಸಾಮಗ್ರಿಗಳಿಗೆ ಪರದಾಡಬೇಕಿಲ್ಲ. ಸಾಧ್ಯವಾದ ಮಟ್ಟಿಗೆ ಮನೆಬಾಗಿಲಿಗೆ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಕೊರೊನಾ ಸಾಂಕ್ರಾಮಿಕವಾಗಿ ಬರುವುದಿಲ್ಲ ಎಂಬ ನಿಷ್ಕಾಳಜಿ ಬಿಟ್ಟು ಮುಂಜಾಗೃತ ಕ್ರಮಗಳನ್ನು ಪಾಲಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು.
ನಿಷ್ಕಾಳಜಿ ಬಿಟ್ಟು ಜನತಾ ಕರ್ಪ್ಯೂಗೆ ಸಹಕರಿಸಿ: ಉತ್ತರಕನ್ನಡ ಜಿಲ್ಲಾ ಡಿಸಿ ಮನವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ್ ಮಾತನಾಡಿ, ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಸೈರನ್ ವ್ಯವಸ್ಥೆ ಮಾಡಲಾಗಿದ್ದು, ಜನತಾ ಕರ್ಫ್ಯೂ ಆರಂಭದ ಸೈರನ್ ಮುಂಜಾನೆ 6:50 ಕ್ಕೆ ಕೂಗುವುದು.
ವೈದ್ಯರು, ಆಸ್ಪತ್ರೆ ಸಿಬ್ಬಂದಿ, ಪೂಲೀಸ್ ಸಿಬ್ಬಂದಿಗಳ ಅವಿರತ ಪ್ರಯತ್ನಕ್ಕಾಗಿ ಚಪ್ಪಾಳೆಯ ಮೂಲಕ ಅಭಿನಂದನೆಗಳನ್ನು ಸಲ್ಲಿಸುವ ಸಲುವಾಗಿ ಸಂಜೆ 5 ಗಂಟೆಗೆ ಅರ್ಧ ನಿಮಿಷದ ಸೈರನ್, ರಾತ್ರಿ 9 ಗಂಟೆಗೆ ಜನತಾ ಕಫ್ರ್ಯೂ ಮುಕ್ತಾಯದ ಸೈರನ್ ಹಾಕಲಾಗುವುದು. ಜನತಾ ಕರ್ಫ್ಯೂ ಕಟ್ಟು ನಿಟ್ಟಾಗಿ ನಡೆಯುವಂತೆ ತಹಶೀಲ್ದಾರ್, ಪಿಡಿಒ ಹಾಗೂ ಗ್ರಾಮಲೆಕ್ಕಿಗರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ಜನತಾ ಕರ್ಪ್ಯೂಗೆ ಕರೆ ನೀಡಿರುವ ಹಿನ್ನೆಲೆ ಎಲ್ಲರೂ ಸಹಕಾರ ನೀಡಬೇಕು. ಯಾರೂ ಆದೇಶ ಉಲ್ಲಂಘನೆ ಮಾಡುತ್ತಾರೊ ಅಂತಹ ವ್ಯಕ್ತಿಗಳ ವಿರುಧ್ಧ ಐಪಿಸಿ ಸೆಕ್ಷನ್ 188 ಪ್ರಕಾರ ಎಫ್‍ಐಆರ್ ದಾಖಲಿಸಲಾಗುವುದು. ಮುಂದಿನ ಒಂದು ವಾರ ಕಾಲ ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಖಾಸಗಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮುಂದೂಡುವಂತೆ ಸೂಚಿಸಲಾಗಿದೆ ಎಂದರು.