ಕಾರವಾರ: ರಾಜ್ಯ ರಾಜಕಾರದಲ್ಲಿ ದಿವಂಗತ ಎಸ್.ಬಂಗಾರಪ್ಪ ಸಾಕಷ್ಟು ಪ್ರಭಾವ ಬೀರಿದ್ದು, ಉತ್ತರ ಕನ್ನಡ ಜಿಲ್ಲೆಯ ರಾಜಕೀಯದಲ್ಲೂ ಹಿಡಿತ ಹೊಂದಿದ್ದರು. ಸದ್ಯಕ್ಕೆ ವಿಧಾನಪರಿಷತ್ ಚುನಾವಣಾ ಕಣ ರಂಗೇರಿದ್ದು, ಪಕ್ಷಕ್ಕೆ ಸೇರ್ಪಡೆಯಾಗಿರುವ ಮಧು ಬಂಗಾರಪ್ಪ ಮೂಲಕ ಜಿಲ್ಲೆಯಲ್ಲಿ ಪರಿಷತ್ ಸ್ಥಾನ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ.
legislative council election campaign: ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಾವು ಜೋರಾಗುತ್ತಿರುವಂತೆ ಉತ್ತರಕನ್ನಡದಲ್ಲೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿ ಜಿಲ್ಲೆಯಲ್ಲಿ ವಿಧಾನಪರಿಷತ್‌ಗೆ 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರಾದರೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಎರಡೂ ಪಕ್ಷಗಳಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ತಮ್ಮ ಅಭ್ಯರ್ಥಿಯ ಗೆಲುವಿಗಾಗಿ ಶತಾಯಗತಾಯ ಪ್ರಯತ್ನಿಸುತ್ತಿವೆ.
ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಾಂಗ್ರೆಸ್, ತನ್ನ ರಣತಂತ್ರ ರೂಪಿಸಿಕೊಂಡಿದ್ದು, ಈ ಹಿಂದೆ ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಹೊಂದಿದ್ದ ದಿವಂಗತ ಎಸ್. ಬಂಗಾರಪ್ಪ ಬೆಂಬಲವನ್ನ ಸಂಘಟಿಸಲು ಮುಂದಾಗಿದೆ.
ರಾಜ್ಯ ರಾಜಕಾರಣದಲ್ಲಿ ದಿವಂಗತ ಎಸ್.ಬಂಗಾರಪ್ಪ ಜನಪರ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. ಮಲೆನಾಡು ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ಬಂಗಾರಪ್ಪ ಸಾಕಷ್ಟು ಬೆಂಬಲಿಗರನ್ನ ಹೊಂದಿದ್ದರು. ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಮಧು ಬಂಗಾರಪ್ಪ ಮೂಲಕ ದಿವಂಗತ ಬಂಗಾರಪ್ಪ ಅವರಿಗಿದ್ದ ಜನ ಬೆಂಬಲವನ್ನ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ.
ಸದ್ಯ ಕಾಂಗ್ರೆಸ್‌ನಿಂದ ಪ್ರತಿನಿಧಿಸಿರುವ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರು ಮಧು ಬಂಗಾರಪ್ಪ ಅವರಿಗೆ ಸೋದರ ಮಾವನಾಗಿದ್ದು, ಅಳಿಯನ ಮೂಲಕ ಮತಗಳನ್ನ ಸೆಳೆಯುವ ಪ್ಲಾನ್ ಕಾಂಗ್ರೆಸ್ನದ್ದಾಗಿದೆ. ಭೀಮಣ್ಣ ನಾಯ್ಕರನ್ನ ಅಧಿಕಾರದಲ್ಲಿ ನೋಡಬೇಕೆನ್ನುವುದು ಬಂಗಾರಪ್ಪನವರ ಆಸೆಯಾಗಿತ್ತು. ಹೀಗಾಗಿ, ಬಂಗಾರಪ್ಪ ಅಭಿಮಾನಿಗಳು ಯಾವುದೇ ಪಕ್ಷದಲ್ಲಿದ್ದರೂ ಅವರು ಒಟ್ಟಾಗಿ ಭೀಮಣ್ಣ ಅವರನ್ನ ಗೆಲ್ಲಿಸುತ್ತಾರೆ ಅಂತಾ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.