ಶಿರಸಿ:ಮಹಾಮಳೆಗೆ ಉತ್ತರ ಕನ್ನಡ ತತ್ತರಿಸಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಜನಜೀವನ ಹೈರಾಣಾಗಿದೆ. ಹಲವೆಡೆ ಮನೆಗಳು ಜಲಾವೃತವಾದರೆ, ಬಹುತೇಕ ಕೃಷಿ ಜಮೀನು ಪ್ರವಾಹದ ನೀರಲ್ಲಿ ಮುಚ್ಚಿದೆ. ಗುಡ್ಡ ಕುಸಿತದಿಂದ ಪ್ರಮುಖ ರಸ್ತೆ ಸಂಪರ್ಕ ಕಡಿತವಾಗಿ ಪ್ರಯಾಣಿಕರ ಪಾಡು ದೇವರಿಗೇ ಪ್ರಿಯವಾಗಿದೆ. ಇಡೀ ಮಲೆನಾಡು ಮಳೆನಾಡಾಗಿ, ಮುಳುಗಡೆಯ ಬೀಡಾಗಿ ಮಾರ್ಪಟ್ಟಿದೆ.
ಉತ್ತರ ಕನ್ನಡ ಈಗ ಪ್ರವಾಹದಿಂದ ಉತ್ತರ ಕಾಣದಂತಾಗಿದೆ. ಮನೆಗಳಿಗೆ ನುಗ್ಗುವ ನೀರು ಒಂದೆಡೆಯಾದರೆ, ಕೃಷಿ ಜಮೀನು ಕೊಚ್ಚಿ ಸಾಗುವ ರಭಸದ ನೀರು ಇನ್ನೊಂದೆಡೆ. ಮತ್ತೊಂದೆಡೆ ಗುಡ್ಡ ಕುಸಿತ, ಮಗದೊಂದೆಡೆ ಸಂಪರ್ಕ ಕಟ್...ಈ ಪರಿಸ್ಥಿತಿ ಇಡೀ ಉತ್ತರ ಕನ್ನಡವನ್ನು ನುಂಗಿ ನೀರು ಕುಡಿಯುವಂತಿದೆ. ಮಹಾ ಮಳೆ ಕರಾವಳಿ ಹಾಗೂ ಘಟ್ಟ ಪ್ರದೇಶದಲ್ಲಿ ತನ್ನ ರೌದ್ರ ನರ್ತನ ಮಾಡುತ್ತಿರುವ ಕಾರಣ ಇಡೀ ಜಿಲ್ಲೆಯ ಜನಜೀವನ ಅಸ್ತವ್ಯಸ್ಥವಾಗಿದೆ.
ಮಲೆನಾಡಿನ ಘಟ್ಟ ಪ್ರದೇಶವಾದ ಶಿರಸಿ, ಸಿದ್ದಾಪುರ, ಯಲ್ಲಾಪುರ, ಹಳಿಯಾಳ ಭಾಗದಲ್ಲಿ ವ್ಯಾಪಕ ಮಳೆ ಮುಂದುವರೆದಿದೆ. ಮುಂಡಗೋಡದ ಧರ್ಮಾ ಜಲಾಶಯದಿಂದ ನೀರು ಹೊರಹೋಗುತ್ತಿದ್ದು, ದಾಸನಕೊಪ್ಪ ಬಳಿ ಸೇತುವೆ ಜಲಾವೃತವಾಗಿದೆ. ಬೊಮ್ಮನಳ್ಳಿ ಜಲಾಶಯದಿಂದ ಬರುವ ನೀರಿನ ಪ್ರಮಾಣ ಏರಿಕೆಯಾದ ಕಾರಣ ಯಲ್ಲಾಪುರ ತಾಲೂಕಿನ ಕಾರಕುಂಡಿ ಗ್ರಾಮ ದ್ವೀಪದಂತಾಗಿದೆ. ಬನವಾಸಿ ಭಾಗದಲ್ಲಿ ವರದಾ ನದಿ ಪ್ರವಾಹ ಅಪಾಯ ಮಟ್ಟ ಮೀರಿದ್ದಯ, 3 ಸಾವಿರ ಎಕರೆಯಷ್ಟು ಕೃಷಿ ಭೂಮಿ ಜಲಾವೃತವಾಗಿದೆ. ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮವಾಗಿ ೩ನೇ ದಿನವೂ ಎಲ್ಲಾ ಪ್ರಾಥಮಿಕ-ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ನೀಡಲಾಗಿದೆ.