ಕಾರವಾರ (ಉತ್ತರ ಕನ್ನಡ): ಉತ್ತರ ಕನ್ನಡದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಈಗಾಗಲೇ 800ರ ಗಡಿಯತ್ತ ಸಾಗಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಹರಸಾಹಸಪಡುತ್ತಿದೆ. ಈ ನಿಟ್ಟಿನಲ್ಲಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲು ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ.
ಕರಾವಳಿಯಲ್ಲಿ ಒಂದೆಡೆ ವರುಣ, ಮತ್ತೊಂದೆಡೆ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಜೋರಾಗಿದೆ. ಒಂದೇ ತಿಂಗಳ ಅವಧಿಯಲ್ಲಿ 500 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಎಲ್ಲಾ ತಾಲೂಕುಗಳಿಗೂ ಕೊರೊನಾ ಸೋಂಕು ವ್ಯಾಪಿಸುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವು ತಂದೊಡ್ಡಿದೆ. ಸೋಂಕಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ, ಕೊರೊನಾ ಪತ್ತೆಗೆ ಪರೀಕ್ಷೆಗಳನ್ನು ಹೆಚ್ಚಿಸಲು ಮುಂದಾಗಿದೆ.
ಕೊರೊನಾ ಕಟ್ಟಿಹಾಕಲು ಉತ್ತರ ಕನ್ನಡ ಸಜ್ಜು ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಕೋವಿಡ್-19 ವಾರ್ಡ್ ನಿರ್ಮಾಣವಾದ ಬೆನ್ನಲ್ಲೇ ಕೊರೊನಾ ಪರೀಕ್ಷೆಗೆ ಲ್ಯಾಬ್ ಅನ್ನು ಸಹ ನಿರ್ಮಿಸಿದೆ. ಜೂನ್ 1ರಿಂದ ಲ್ಯಾಬ್ ಕಾರ್ಯನಿರ್ವಹಿಸುತ್ತಿದ್ದು, ಒಂದು ತಿಂಗಳ ಅವಧಿಯಲ್ಲಿ 4ಸಾವಿರಕ್ಕೂ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಅದರ ವೇಗ ಇನ್ನಷ್ಟು ಹೆಚ್ಚಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕಾಗಿ ಗಂಟಲು ದ್ರವ ಪರೀಕ್ಷೆಯಲ್ಲಿ ಮೂರು ಭಾಗಗಳಾಗಿ ವಿಂಗಡಿಸಿದೆ. ತುರ್ತು ಅಗತ್ಯತೆಯನ್ನು ಗಮನದಲ್ಲಿರಿಸಿ ಪರೀಕ್ಷೆಗಳನ್ನು ವಿಂಗಡಿಸಲು ಸಚಿವರು ಸೂಚನೆ ನೀಡಿದ್ದಾರೆ.
ಮೂರು ಭಾಗಗಳು
- ಮೃತರ ಗಂಟಲು ದ್ರವದ ಮಾದರಿಗಳ ಪರೀಕ್ಷೆಯ ವರದಿ ಎರಡೇ ಗಂಟೆಗಳಲ್ಲಿ ನೀಡಲು ನಿರ್ಧಾರ.
- ಪೊಲೀಸರು, ವೈದ್ಯರು, ಬ್ಯಾಂಕುಗಳು, ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವವರ ಗಂಟಲು ಮಾದರಿಗಳ ಪರೀಕ್ಷೆಗೆ ಆದ್ಯತೆ.
- 60 ವರ್ಷ ಮೇಲ್ಪಟ್ಟವರ ಗಂಟಲು ದ್ರವ ಮಾದರಿಗಳ ಪರೀಕ್ಷೆಗೆ ಹೆಚ್ಚಿನ ಆದ್ಯತೆ.
ಹೆಚ್ಚು ಪರೀಕ್ಷೆಗಳಿಂದ ಸೋಂಕಿನ ಪತ್ತೆ ಕಾರ್ಯವೂ ಶೀಘ್ರ ಆಗುವುದರಿಂದ ಸೋಂಕು ಹೆಚ್ಚು ವ್ಯಾಪಿಸದಂತೆ ಹಾಗೂ ಸಾವು ಸಂಭವಿಸದಂತೆ ತಡೆಯಲು ಸಹಾಯವಾಗಲಿದೆ ಎಂಬುದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಅಭಿಪ್ರಾಯವಾಗಿದೆ. ರೋಗ ಲಕ್ಷಣ ರಹಿತ ಕೊರೊನಾ ಸೋಂಕಿತರಿಗೆ ಜಿಲ್ಲೆಯ ಆಯಾ ತಾಲೂಕುಗಳಲ್ಲೇ ಚಿಕಿತ್ಸೆ ನೀಡುವುದಕ್ಕೂ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.