ಕಾರವಾರ: ಈ ಬಾರಿಯೂ ಮುಂಗಾರು ಮಳೆ ಆರಂಭದಲ್ಲಿಯೇ ಅಬ್ಬರಿಸುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಕೆಲ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಬೈಕ್ ಮೂಲಕವೇ ತೆರಳಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೆ, ಸ್ಥಳೀಯರೊಂದಿಗೆ ಅಲ್ಲಿನ ಸಮಸ್ಯೆಗಳ ಕುರಿತು ಕುರಿತು ಚರ್ಚಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾತನಾಡಿದರು ಕಳೆದ ಬಾರಿ ಪ್ರವಾಹ ಪರಿಸ್ಥಿತಿ ಎದುರಾದ ಕುಮಟಾದ, ಹೊನ್ನಾವರದ ಗುಂಡಬಾಳ, ಭಾಸ್ಕೇರಿ, ಬಡಗಣಿ ನದಿತೀರದ ಪ್ರದೇಶಗಳಿಗೆ ಈ ಬಾರಿ ಮುಂಜಾಗೃತಾ ಕ್ರಮವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಜನಸಾಮಾನ್ಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರವಾಹ ಪರಿಸ್ಥಿತಿಯಲ್ಲಿ ಉಂಟಾಗುವ ಸಮಸ್ಯೆ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ವ್ಯವಸ್ಥೆ, ಅಧಿಕಾರಿಗಳು ಸ್ಪಂದಿಸುವ ರೀತಿ ಇನ್ನಿತರ ವಿಷಯದ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ.
ಇದೇ ವೇಳೆ ವಾಹನಗಳು ತೆರಳದ ಕಡಗೇರಿ, ನಾಥಗೇರಿ ಪ್ರದೇಶಕ್ಕೆ ಪಿಡಿಓ ಚೆನ್ನಬಸಪ್ಪ ಅವರ ಬೈಕ್ನಲ್ಲಿ ತೆರಳಿ ವಿಶೇಷ ಮುತುವರ್ಜಿ ವಹಿಸಿದ ಅವರು ನೆರೆ ಹಾವಳಿ ತುತ್ತಾಗುತ್ತಿರುವ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚಿಸಿದರು. ಓರ್ವ ಜಿಲ್ಲಾಧಿಕಾರಿಯ ಈ ನಡೆ ಅಲ್ಲಿನ ಜನರ ಮೆಚ್ಚುಗೆಗೂ ಪಾತ್ರವಾಯಿತು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಕೊರೊನಾ ಸಂದರ್ಭದಲ್ಲಿ ನೆರೆಪರಿಸ್ಥಿತಿ ಎದುರಿಸುವುದು ಸವಾಲಿನ ಕೆಲಸ. ಎಲ್ಲಾ ರೀತಿಯಲ್ಲೂ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಸೂಚಿಸಲಾಗಿದೆ. ಪ್ರವಾಹದ ಪರಿಸ್ಥಿತಿ ಎದುರಿಸುವ ಬಗ್ಗೆ ಇಲ್ಲಿನ ಜನರಿಗೆ ತಿಳಿದಿದೆಯಾದರೂ ಸರ್ಕಾರದ ನೆರವು ಕೂಡ ಅಗತ್ಯ. ಕಾಳಜಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ. ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಹಣದ ಯಾವುದೇ ತೊಂದರೆ ಇಲ್ಲ. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕಾಳಜಿ ಕೇಂದ್ರಕ್ಕೆ ಬರುವವರು ಭಯಪಡುವ ಅಗತ್ಯ ಇಲ್ಲ ಎಂದರು.
ಓದಿ:ಯಾವುದೇ ಒತ್ತಡದಿಂದ ಸಿಂಧೂರಿ ವರ್ಗಾವಣೆಯಾಗಿಲ್ಲ: ಸಚಿವ ಸೋಮಶೇಖರ್ ಸ್ಪಷ್ಟನೆ