ಶಿರಸಿ: ಪ್ರವಾಹದಿಂದ ಹಾನಿಯಾದ ತೋಟ, ಗದ್ದೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿಯಡಿ ಮಣ್ಣಿನ ಕೆಲಸ ಹೆಚ್ಚು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಹೆಗಡೆಕಟ್ಟಾದಲ್ಲಿ ಪ್ರವಾಹ ಹಾನಿ ವೀಕ್ಷಣೆ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲಿ ರೂಪಿಸಿ, ಮಳೆಗಾಲದ ನಂತರ ಕೃಷಿ ಅಭಿವೃದ್ಧಿಗೆ ಸಹಕಾರ ಆಗುವ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು ಹಾಗೂ ಗದ್ದೆಗಳಲ್ಲಿ ತೊಳೆದುಕೊಂಡು ಹೋಗಿರುವ ಮಣ್ಣುಗಳ ಕೆಲಸ ಮಾಡಲು ಅಗತ್ಯ ಕಾನೂನು ರೂಪಿಸಲಾಗುವುದು ಎಂದರು.
ಜಿಲ್ಲೆಯಾದ್ಯಂತ ಭಾರೀ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ಅಡಿಕೆ ತೋಟ, ಗದ್ದೆ, ಏಲಕ್ಕಿ ಬೆಳೆಗಳು ನಾಶವಾಗಿ ರೈತರು ಹೆಚ್ಚಿನ ಹಾನಿ ಅನುಭವಿಸಿದ್ದಾರೆ. ನಾಟಿ ಗದ್ದೆಗಳು ತೊಳೆದುಕೊಂಡು ಹೋಗಿ ಮುಂದೆ ನಾಟಿ ಮಾಡಲೂ ಸಾಧ್ಯವಾಗದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳೂ ಬಿದ್ದಿವೆ.