ಕಾರವಾರ(ಉತ್ತರ ಕನ್ನಡ):ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಉತ್ತರಕನ್ನಡ ಜಿಲ್ಲೆಯ ಸೊಬಗಿಗೆ ಮನಸೋಲದವರೇ ಇಲ್ಲ. ಮಳೆಗಾಲ ಪ್ರಾರಂಭವಾದಾಗ ಎಲ್ಲೆಂದರಲ್ಲಿ ಧುಮ್ಮಿಕ್ಕುವ ಜಲಪಾತಗಳ ಸೊಬಗು ಒಂದೆಡೆಯಾದರೆ, ಇನ್ನೊಂದೆಡೆ ಐತಿಹಾಸಿಕ ಸ್ಥಳಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಜೋಯಿಡಾ ಭಾಗದಲ್ಲಿ ಪ್ರಾರಂಭವಾಗಿರುವ ಜಲಸಾಹಸಿ ಕ್ರೀಡೆಗಳು ಇನ್ನಷ್ಟು ಪ್ರವಾಸಿಗರನ್ನ ಆಕರ್ಷಿಸುತ್ತವೆ..
ಕಳೆದ ಬಾರಿಯಂತೆ ಈ ಸಾರಿಯೂ ಕೊರೊನಾ ಅಬ್ಬರದಿಂದಾಗಿ ಲಾಕ್‌ಡೌನ್ ಹೇರಿದ್ದ ಕಾರಣ ಪ್ರವಾಸಿ ತಾಣಗಳು ಸಂಪೂರ್ಣ ಮಂಕಾಗಿದ್ದವು. ಪ್ರವಾಸಿಗರನ್ನೇ ನಂಬಿದ್ದ ಇಲ್ಲಿನ ಜಲಸಾಹಸಿ ಕೇಂದ್ರಗಳು, ಹೋಂ ಸ್ಟೇಗಳು ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು.
ಈ ನಡುವೆ ಸರ್ಕಾರ ಕೊರೊನಾ ಕಡಿಮೆಯಾಗುತ್ತಿದ್ದಂತೆ ಅನ್‌ಲಾಕ್ ಘೋಷಣೆ ಮಾಡಿತ್ತಾದರೂ ಪ್ರವಾಸಿ ತಾಣಗಳಿಗೆ ಅನುಮತಿಸಿರಲಿಲ್ಲ. ಆದರೆ, ಇದೀಗ ಪ್ರವಾಸಿ ತಾಣಗಳಿಗೆ ಮುಕ್ತ ಅವಕಾಶ ನೀಡಲಾಗಿದೆ.
ಅನ್‌ಲಾಕ್ 4.0 ಜಾರಿಯಾದ ಬೆನ್ನಲ್ಲೇ ಜಲಸಾಹಸಿ ಚಟುವಟಿಕೆಗಳಿಗೂ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಕೋವಿಡ್ ಮುನ್ನೆಚ್ಚರಿಕೆ ಜೊತೆಗೆ ಪ್ರವಾಸಿಗರ ಸಂಪೂರ್ಣ ವಿವರವನ್ನು ನಿತ್ಯವೂ ಗ್ರಾಮ ಪಂಚಾಯತ್‌ಗಳಿಗೆ ಸಲ್ಲಿಸಲು ಸೂಚಿಸಲಾಗಿದೆ. ರ್ಯಾಪ್ಟಿಂಗ್ ಇಲ್ಲವೇ ಜಲಸಾಹಸಿ ಚಟುವಟಿಕೆ ವೇಳೆ ಸುರಕ್ಷತೆಯೊಂದಿಗೆ ನಿಗದಿ ಪಡಿಸಿದ ಜನರಿಗಷ್ಟೇ ಅವಕಾಶ ಕಲ್ಪಿಸಲು ಸೂಚಿಸಲಾಗಿದೆ.