ಕರ್ನಾಟಕ

karnataka

ETV Bharat / state

ಮದ್ಯದಿಂದಲೇ ಅಭಿಷೇಕ, ಸಿಗರೇಟ್​ ಆರತಿ: ಕಾರವಾರದಲ್ಲೊಂದು ವಿಶಿಷ್ಟ ದೇವರು - ದೇವರಿಗೆ ಮದ್ಯದ ಅಭಿಷೇಕ

ಮದ್ಯದ ಅಭಿಷೇಕ ಹಾಗೂ ಸಿಗರೇಟ್‌ನ ಆರತಿ ಬೆಳಗುವ ಸಂಪ್ರದಾಯ ಇರುವ ಕಾರವಾರದ ಖಾಪ್ರಿ ದೇವರ ವಿಶಿಷ್ಟ ಜಾತ್ರೆ ಭಾನುವಾರ ನಡೆಯಿತು. ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರಿಗೆ ಮದ್ಯ, ಸಿಗರೇಟು, ಮೇಣದಬತ್ತಿ, ಕೋಳಿ ಮುಂತಾದವುಗಳನ್ನು ಹರಕೆಯ ರೂಪದಲ್ಲಿ ಅರ್ಪಿಸಿದರು.

ಕಾರವಾರದ ಖಾಪ್ರಿ ದೇವರ ಜಾತ್ರೆ
ಕಾರವಾರದ ಖಾಪ್ರಿ ದೇವರ ಜಾತ್ರೆ

By

Published : Mar 28, 2022, 7:05 AM IST

ಕಾರವಾರ: ಸಾಮಾನ್ಯವಾಗಿ ದೇವರಿಗೆ ನೈವೇದ್ಯ ಅಂತಾ ಹಣ್ಣು-ಹಂಪಲು, ತಿಂಡಿ-ತಿನಿಸುಗಳನ್ನು ಇಡುತ್ತಾರೆ. ಇನ್ನೂ ಹೆಚ್ಚಾಗಿ ಹಾಲು-ತುಪ್ಪದಿಂದ ಅಭಿಷೇಕ ಮಾಡಿ ತುಪ್ಪದ ದೀಪದಿಂದ ಆರತಿ ಮಾಡಲಾಗುತ್ತದೆ. ಆದರೆ, ಇಲ್ಲೊಂದು ದೇವರು ಮಾತ್ರ ಉಳಿದೆಲ್ಲಾ ದೇವರಿಗಿಂತ ಫುಲ್ ಡಿಫ್ರೆಂಟ್. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿ ಮಾಡ್ತಾರೆ.

ಹೌದು, ಸಾಮಾನ್ಯವಾಗಿ ಜಾತ್ರೆಗಳಲ್ಲಿ ದೇವರಿಗೆ ಹಣ್ಣು ಹಂಪಲುಗಳನ್ನು ನೈವೇದ್ಯ ಮಾಡುತ್ತಾರೆ. ಇದಲ್ಲದೇ, ಹಾಲಿನ ಅಭಿಷೇಕ, ಎಣ್ಣೆ, ಬೆಣ್ಣೆಯ ನೈವೇದ್ಯ ಸಹ ಮಾಡಲಾಗುತ್ತದೆ. ಆದರೆ, ಕಾರವಾರದ ಖಾಪ್ರಿ ದೇವರ ಜಾತ್ರೆ ಮಾತ್ರ ಕೊಂಚ ವಿಭಿನ್ನವಾಗಿ ನಡೆಯುತ್ತದೆ. ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ, ಖಾಪ್ರಿ ದೇವರಿಗೆ ಪೂಜೆಯನ್ನ ಸಲ್ಲಿಸುತ್ತಾರೆ.

ಹರಕೆ ಇಟ್ಟುಕೊಂಡು ಬಂದಂತಹ ಭಕ್ತರು ಸಿಗರೇಟು, ಕ್ಯಾಂಡಲ್‌ನಿಂದ ಆರತಿಯನ್ನ ಮಾಡೋದರ ಜೊತೆಗೆ ಮಧ್ಯದಿಂದಲೇ ದೇವರಿಗೆ ಅಭಿಷೇಕ ಸಹ ಮಾಡ್ತಾರೆ. ಜೊತೆಗೆ ಕೋಳಿ ಬಲಿ ಕೊಟ್ಟು ರಕ್ತದಿಂದ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಖಾಪ್ರಿ ದೇವರು ಶಕ್ತಿ ದೇವರಾಗಿರುವುದರಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆ ತೀರಿಸಲಾಗುತ್ತದೆ ಅಂತಾರೆ ಭಕ್ತರು.

ಕಾರವಾರದ ಖಾಪ್ರಿ ದೇವರ ಜಾತ್ರೆ

ತನ್ನದೇ ಆದ ಇತಿಹಾಸ ಹೊಂದಿರುವ ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಆತ ಕಣ್ಮರೆಯಾದ ನಂತರ ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ನಂತರ ಕನಸ್ಸಿನಲ್ಲೂ ದೇವರು ಬಂದು ತನಗೆ ಕೋಳಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನ ಕಟ್ಟಲಾಯಿತಂತೆ.

ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು, ಪ್ರತಿ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ, ಹಣ್ಣು ಕಾಯಿ ಸಮರ್ಪಿಸುವ ಜೊತೆಗೆ ಸಾರಾಯಿ, ಸಿಗರೇಟ್, ಕೋಳಿ ಅರ್ಪಿಸುತ್ತಾರೆ. ಅಲ್ಲದೇ, ಹೆದ್ದಾರಿಗೆ ಹೊಂದಿಕೊಂಡೇ ಈ ದೇವಸ್ಥಾನವಿದ್ದು, ದೇವಾಲಯ ನಿರ್ಮಾಣವಾದ ಬಳಿಕ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಸಹ ಕಡಿಮೆಯಾಗಿದೆ ಅನ್ನೋದು ಭಕ್ತರ ಅಭಿಪ್ರಾಯ. ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ಕೇವಲ ಕಾರವಾರದಿಂದ ಮಾತ್ರವಲ್ಲದೇ ನೆರೆಯ ಗೋವಾ, ಮಹಾರಾಷ್ಟ್ರದಿಂದ ಸಹ ಭಕ್ತರು ಆಗಮಿಸುವ ಜೊತೆಗೆ ದೇವರಿಗೆ ಹೆಂಡ, ಸಿಗರೇಟು, ಕೋಳಿಯನ್ನ ನೀಡಿ ತಮ್ಮ ಹರಕೆ ಈಡೇರಿಸಿಕೊಳ್ಳುತ್ತಾರೆ.

ಇದನ್ನೂ ಓದಿ:ಶಾಂತಿ ಮಾತುಕತೆ- ಯಾವುದೇ ಕಾರಣಕ್ಕೂ ಸಾರ್ವಭೌಮತೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಝೆಲೆನ್ಸ್ಕಿ

ABOUT THE AUTHOR

...view details