ಕಾರವಾರ(ಉತ್ತರಕನ್ನಡ): ಹೊಸ ಫಲ ಅಥವಾ ಫಸಲನ್ನು ಮನೆಗೆ ತರುವ ಪ್ರಕ್ರಿಯೆಯನ್ನು ಕರಾವಳಿ ಭಾಗದಲ್ಲಿ ಹೊಸ್ತು ಹಬ್ಬವಾಗಿ ಆಚರಿಸಲಾಗುತ್ತದೆ. ಗ್ರಾಮೀಣ ಸೊಗಡು ಹೊಂದಿರುವ ಈ ವಿಶೇಷ ಹೊಸ್ತು ಹಬ್ಬವನ್ನು ಆಚರಿಸದಿದ್ದರೆ ಮುಂಬರುವ ಯಾವ ಹಬ್ಬವನ್ನೂ ಆಚರಿಸುವಂತಿಲ್ಲ ಎಂಬ ನಂಬಿಕೆ ಇಲ್ಲಿನ ಜನರದ್ದು. ಈ ಸಂಬಂಧ ಹೊಸ್ತು ಹಬ್ಬದಂದು ಊರಿಗೆ ಊರೇ ಗ್ರಾಮಗಳ ಗದ್ದೆಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.
ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ಜನರು ಒಟ್ಟು ಸೇರಿ ಹೊಸ್ತು ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ನೂರಾರು ವರ್ಷಗಳಿಂದ ಇಲ್ಲಿನ ರೈತರು ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಹಬ್ಬವನ್ನು ಹರಣ ಮೂರ್ತ, ಹೊಸ ಧಾನ್ಯ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
ಗದ್ದೆಯಲ್ಲಿ ವಿಶೇಷ ಪೂಜೆ:ಹಬ್ಬದ ದಿನ ವಾದ್ಯ ಮೇಳದೊಂದಿಗೆ ಭಕ್ತರು ಹಾಗೂ ಅರ್ಚಕರು ಗದ್ದೆಗೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ಭತ್ತದ ತೆನೆ ಹೊತ್ತು ತರುತ್ತಾರೆ. ಕುಮಟಾದ ಬರ್ಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಸಮುದಾಯದವರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಪ್ರತಿವರ್ಷ ವಿಜಯದಶಮಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ವೇಳೆ ಅಂದು ಆಚರಿಸಲು ಸಾಧ್ಯವಾಗದೇ ಇದ್ದರೆ ಗಂಗಾಷ್ಟಮಿಯಂದು ಆಚರಿಸಲಾಗುತ್ತದೆ. ಈ ಬಾರಿ ವಿಜಯದಶಮಿಯಂದು ಹಬ್ಬ ಆಚರಿಸಲು ಸಾಧ್ಯವಾಗದೇ ಇರುವುದರಿಂದ ಗಂಗಾಷ್ಟಮಿಯಂದು ಆಚರಿಸಲಾಗಿದೆ ಎಂದು ಅರ್ಚಕ ಭಾಸ್ಕರ್ ದೇಸಾಯಿ ಹೇಳಿದರು.