ಕಾರವಾರ:ರಾಜ್ಯದೆಲ್ಲೆಡೆ ಶಾಲಾ ತರಗತಿಗಳು ಆರಂಭವಾಗಿ ತಿಂಗಳು ಸಮೀಪಿಸಿದೆ. ಆದರೆ, ಇವರೆಗೂ ಸರ್ಕಾರಿ ಶಾಲೆಗಳಿಗೆ ಶೂ ಮತ್ತು ಸಮವಸ್ತ್ರ ಪೂರೈಕೆಯಾಗಿಲ್ಲ. ಇದರಿಂದ ಮಕ್ಕಳು ಹಳೆ ಬಟ್ಟೆ ತೊಟ್ಟು ಶಾಲೆಯೆಡೆಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಎದುರಾಗಿದೆ.
ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಪ್ರತಿ ವರ್ಷ ಸಮವಸ್ತ್ರ ಹಾಗೂ ಶೂ ಪೂರೈಕೆ ಮಾಡುತ್ತದೆ. ಆದರೆ ಈ ಭಾರಿ ಶಾಲೆಗಳು ಪ್ರಾರಂಭವಾಗಿ ತಿಂಗಳು ಸಮೀಪಿಸಿದರು ಇನ್ನು ಸಮವಸ್ತ್ರ ಮತ್ತು ಶೂ ಪೂರೈಕೆ ಮಾಡಿಲ್ಲ ಇದರಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆಗಳ ಮಕ್ಕಳು ಹಳೆಬಟ್ಟೆಯಲ್ಲಿಯೇ ಶಾಲೆಗೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಗೂ ಸಮವಸ್ತ್ರ ಪೂರೈಕೆಯಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 451 ಕಿರಿಯ ಪ್ರಾಥಮಿಕ ಹಾಗೂ 487 ಹಿರಿಯ ಪ್ರಾಥಮಿಕ ಮತ್ತು 49 ಸರ್ಕಾರಿ ಪ್ರೌಢ ಶಾಲೆಗಳಿವೆ. ಸುಮಾರು 46 ಸಾವಿರದಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಇದುವರೆಗೂ ಶಾಲೆಗಳಿಗೆ ಸಮವಸ್ತ್ರ ಪೂರೈಕೆಯಾಗಿಲ್ಲ. ಇದೆ ಪರಿಸ್ಥಿತಿ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿಯೂ ಮುಂದುವರಿದಿದೆ. ಆದರೆ ಹಳೆ ಬಟ್ಟೆಯಲ್ಲಿ ಶಾಲೆಗೆ ತೆರಳುವುದು ಮಕ್ಕಳ ಬೇಸರಕ್ಕೂ ಕಾರಣವಾಗುತ್ತಿದೆ.