ಕಾರವಾರ:ಕಳ್ಳತನ ಪ್ರಕರಣದ ಆರೋಪದಡಿ ವಿಚಾರಣೆಗೆ ಕರೆ ತಂದಿದ್ದ ಕೈದಿಯೋರ್ವ ಪೊಲೀಸ್ ಠಾಣೆಯಲ್ಲಿ ಸೈನೆಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ದಿಲೀಪ ಮಂಡೇಲ್ ಆತ್ಮಹತ್ಯೆಗೆ ಶರಣಾದ ವಿಚಾರಣಾಧೀನ ಕೈದಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಪ್ರಕರಣದ ಸಂಪೂರ್ಣ ವಿವರ:ಹೊನ್ನಾವರ ಪಟ್ಟಣದ ಸಾಲೆಹಿತ್ತಲ್ ಮನೆಯಲ್ಲಿ ಬಂಗಾರ ಕಳ್ಳತನ ಪ್ರಕರಣ ಪತ್ತೆ ಕಾರ್ಯದಲ್ಲಿರುವಾಗ ಚಿನ್ನಕ್ಕೆ ಹೊಳಪು ನೀಡುತ್ತೇವೆ ಎಂದು ಮೃತ ವ್ಯಕ್ತಿಯು ತಂದೆಯ ಜತೆ ಪಟ್ಟಣದಲ್ಲಿ ವಂಚಿಸಲು ಯತ್ನಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ದೂರನ್ನು ಆಧರಿಸಿ ವಿಚಾರಣೆಗೆ ಕರೆತರಲಾಗಿತ್ತು. ವಿಚಾರಣೆಯ ಹಂತದಲ್ಲಿರುವಾಗ ಆರೋಪಿತ ನೀರು ಕುಡಿಯುತ್ತೇನೆ ಎಂದು ಬ್ಯಾಗ್‌ನಲ್ಲಿ ತಂದಿದ್ದ ಸೈನೆಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕಾರಾಗೃಹದ ಕಿಟಕಿಗೆ ನೇಣು ಬಿಗಿದುಕೊಂಡು ವಿಚಾರಣಾಧೀನ ಕೈದಿ ಆತ್ಮಹತ್ಯೆ
ಐವರು ಪೊಲೀಸರು ಅಮಾನತು:ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ನಂತರ ಮಂಗಳೂರು ವಲಯದ ಐಜಿ ಚಂದ್ರಗುಪ್ತ ಸುದೀರ್ಘ ಎರಡು ಗಂಟೆಯ ವಿಚಾರಣೆಯ ಬಳಿಕ ಸಿಪಿಐ ಮಂಜುನಾಥ ಇ.ಒ, ಪಿಎಸ್ಐ ಮಂಜೇಶ್ವರ ಚಂದಾವರ, ಸಿಬ್ಬಂದಿಗಳಾದ ಸಂತೋಷ, ರಮೇಶ ಲಂಬಾಣಿ ಹಾಗೂ ಮಹಾವೀರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಇಂದು ಮಾಜಿಸ್ಟೇಟ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಪ್ರಕರಣ ಸಂಬಂಧಿಸಿದಂತೆ ಮಾನವ ಹಕ್ಕು ಆಯೋಗ, ಸಿ.ಐ.ಡಿ ಅಧಿಕಾರಿಗಳು ಪ್ರಕರಣದ ವಿಚಾರಣೆಗೆ ಇಂದು ಆಗಮಿಸುವ ಸಾಧ್ಯತೆ ಇದೆ. ತನಿಖೆಯ ಬಳಿಕ ಪ್ರಕರಣದ ಸತ್ಯಾಸತ್ಯತೆ ಬೆಳಕಿಗೆ ಬರಲಿದೆ.