ಕಾರವಾರ: ಉತ್ತರಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಳೆದ ಎರಡು ಮೂರು ದಶಕಗಳಿಂದ ಬೇಡಿಕೆ ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಸರ್ಕಾರಗಳೂ ಕುಣಬಿ ಸಮುದಾಯದವರ ಬೇಡಿಕೆಗೆ ಮನ್ನಣೆ ನೀಡಿರಲಿಲ್ಲ. ಇದೀಗ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಲು ಮುಂದಾಗಿರುವ ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಪಾದಯಾತ್ರೆ ಮೂಲಕ ಆಗಮಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಹಾಲಕ್ಕಿ, ಕುಣಬಿ, ಗೌಳಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಎರಡು-ಮೂರು ದಶಕಗಳಿಂದ ಕೇಳಿ ಬರುತ್ತಿರುವ ಕೂಗು. ಅದರಲ್ಲೂ ಕುಣಬಿ ಸಮಾಜ ತಮ್ಮನ್ನು 2ಎ ಪ್ರವರ್ಗದಿಂದ ತೆಗೆದು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಾಕಷ್ಟು ಸಮಯಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದೆ ತಮ್ಮ ಮನವಿಗಳನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಹಲವರ ಬಳಿ ಮನವಿಯನ್ನ ಮಾಡಿಕೊಂಡು ಬರುತ್ತಿದ್ದರು ದಶಕಗಳಿಂದಲೂ ಸಮುದಾಯಕ್ಕೆ ಆಶ್ವಾಸನೆ ದೊರೆಯುತ್ತಿದೆ ಹೊರತು ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಕುಣಬಿ ಸಮುದಾಯದವರು ಜೋಯಿಡಾದಿಂದ ಕಾರವಾರದವರೆಗೆ ಸುಮಾರು 100 ಕಿ.ಮೀ ಪಾದಯಾತ್ರೆ ಮೂಲಕ ಆಗಮಿಸಿ ಹೋರಾಟಕ್ಕೆ ಮುಂದಾದರು. ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲೇಬೇಕು ಎಂದು ಪಟ್ಟು ಹಿಡಿದರು.
ಸಾಮಾಜಿಕ ಹಾಗೂ ರಾಜಕೀಯ ಹಿನ್ನಡೆಯಾಗಿದೆ : ಈ ವೇಳೆ ಮಾತನಾಡಿದ ಕುಣಬಿ ಸಮುದಾಯದ ಜಿಲ್ಲಾಧ್ಯಕ್ಷ ಸುಭಾಷ್ ಗಾವಡಾ, ಕಳೆದ 30 ವರ್ಷಗಳಿಂದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದರೂ ಸರ್ಕಾರ ಇಂದಿಗೂ ಪರಿಗಣಿಸಿಲ್ಲ. ನಮಗೆ ಪರಿಶಿಷ್ಟ ಪಂಗಡಕ್ಕೆ ಸೇರುವ ಎಲ್ಲಾ ಅರ್ಹತೆಗಳಿದೆ. 2003ರಲ್ಲಿ ಗೋವಾದ ನಮ್ಮ ಕುಲಬಾಂದವರಾದ ಅಲ್ಲಿನ ಕುಣಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ. ಆದರೆ ಅದೇ ಸಮುದಾಯದ ನಮ್ಮನ್ನು ಸೇರಿಸಿಲ್ಲ. ಇದರಿಂದ ನಮ್ಮ ಬುಡಕಟ್ಟು ಕುಣಬಿ ಸಮುದಾಯದ ಸಾಮಾಜಿಕ ಹಾಗೂ ರಾಜಕೀಯ ಹಿನ್ನಡೆಗೆ ಕಾರಣವಾಗಿದೆ. ಕೂಡಲೇ ಕೇಂದ್ರ ಸರ್ಕಾರ ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಇಂದು ಪಾದಯಾತ್ರೆ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ಆಗ್ರಹಿಸಿದರು.