ಕಾರವಾರ(ಉತ್ತರಕನ್ನಡ):ಐದಕ್ಕಿಂತ ಹೆಚ್ಚು ಕೋವಿಡ್ ಸೋಂಕು ಪ್ರಕರಣ ದಾಖಲಾದ ಶಾಲೆಗಳನ್ನು ಮಾತ್ರ ಒಂದು ವಾರಗಳ ಕಾಲ ಬಂದ್ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ಎರಡು ಶಾಲೆಗಳು ಕಾಲ ಬಂದಾಗಲಿವೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳನ್ನು ಬಂದ್ ಮಾಡುವ ಬಗ್ಗೆ ಆಯಾ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸದ್ಯ ಕಾರವಾರ ನಗರದ ಬಾಲಮಂದಿರ ಹಾಗೂ ಯಲ್ಲಾಪುರ ತಾಲೂಕಿನ ಕಿರುವತ್ತಿಯ ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಒಂದು ವಾರಗಳ ಕಾಲ ಬಂದ್ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿಲ್ಲ. ಹೀಗಾಗಿ ಎಲ್ಲಾ ಶಾಲಾ, ಕಾಲೇಜು ಬಂದ್ ಮಾಡುವ ಅನಿವಾರ್ಯತೆ ಎದುರಾಗಿಲ್ಲ. ಆದರೆ 5ಕ್ಕಿಂತ ಹೆಚ್ಚಿನ ಪ್ರಕರಣ ಯಾವ ಶಾಲೆಯಲ್ಲಿ ಕಂಡು ಬರುವುದೋ ಅದನ್ನು ಕ್ಲಸ್ಟರನ್ನಾಗಿ ಮಾಡಿ ವಾರಗಳ ಕಾಲ ಬಂದ್ ಮಾಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿತ್ಯ ದಾಖಲಾಗುವ ಪಾಸಿಟಿವ್ ಪ್ರಕರಣಗಳು, ಸ್ಯಾಂಪಲ್ ಸಂಗ್ರಹಣೆ ಬಗ್ಗೆ ಈ ಅಧಿಕಾರಿಗಳು ವರದಿ ನೀಡಲಿದ್ದಾರೆ ಎಂದು ಹೇಳಿದರು.
ಅಂಗನವಾಡಿಗಳಲ್ಲಿ ಮಕ್ಕಳು, ಕಾರ್ಯಕರ್ತರು, ಶಿಕ್ಷಕರಿಗೆ ಯಾರಿಗೆ ಪಾಸಿಟಿವ್ ಬಂದರೂ ಆಯಾ ಅಂಗನವಾಡಿ ಬಂದ್ ಮಾಡಲಾಗುತ್ತದೆ. ಅಂಗನವಾಡಿಯಲ್ಲಿ ಕೆಲಸ ಮಾಡುವವರಿಗೆ ಹದಿನೈದು ದಿನಕ್ಕೊಮ್ಮೆ ಸ್ಯಾಂಪಲ್ ಸಂಗ್ರಹಿಸಲಾಗುವುದು. ಈವರೆಗೆ ಜಿಲ್ಲೆಯಲ್ಲಿ 6 ವರ್ಷದ ಒಳಗಿನ 6 ವಿದ್ಯಾರ್ಥಿಗಳಿಗೆ, 7ರಿಂದ 12 ವರ್ಷದ ಒಳಗಿನ 15 ವಿದ್ಯಾರ್ಥಿಗಳು ಹಾಗೂ 13ರಿಂದ 18 ವರ್ಷದ ಒಳಗಿನ 41 ವಿದ್ಯಾರ್ಥಿಗಳಿಗೆ ಸೇರಿ ಒಟ್ಟು 52 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.