ಕರ್ನಾಟಕ

karnataka

ETV Bharat / state

ಕಾರವಾರ... ಒಂದು ಕಡೆ ಕರಡಿ ದಾಳಿಗೆ ರೈತ ಬಲಿ: ಇನ್ನೊಂದೆಡೆ ಕಾರಿನ ಮೇಲೆ ಮರಬಿದ್ದು ಪವಾಡ ಸದೃಶ ರೀತಿಯಲ್ಲಿ ಇಬ್ಬರು ಪಾರು! - ಮುಂಡಗೋಡ ಪೊಲೀಸ್ ಠಾಣೆ

ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿರುವ ಘಟನೆ ನಡೆದಿದೆ.

ಕಾರಿನ ಮೇಲೆ ಮರಬಿದ್ದು ಪವಾಡ ಸದೃಶ ಇಬ್ಬರು ಪಾರು
ಕಾರಿನ ಮೇಲೆ ಮರಬಿದ್ದು ಪವಾಡ ಸದೃಶ ಇಬ್ಬರು ಪಾರು

By

Published : Jul 21, 2023, 10:34 PM IST

ಕಾರಿನ ಮೇಲೆ ಮರಬಿದ್ದು ಪವಾಡ ಸದೃಶ ಇಬ್ಬರು ಪಾರು

ಕಾರವಾರ : ಉತ್ತರಕನ್ನಡದಲ್ಲಿ ಕಳೆದ ಕೆಲದಿನಗಳಿಂದ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಕಾರಿನ ಮೂಲಕ ತೆರಳುತ್ತಿದ್ದಾಗ ಗಾಳಿ ಮಳೆಗೆ ಬೃಹತ್ ಮರ ಬಿದ್ದಿದೆ. ಬೃಹತ್ ಮರ ಬಿದ್ದಿರುವ ಹಿನ್ನೆಲೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಸುಬ್ರಹ್ಮಣ್ಯ ಹೆಗಡೆ ಮತ್ತು ಪರಶುರಾಮ ವಾಲೇಕರ್‌ ಸಣ್ಣಪುಟ್ಟ ಗಾಯಗಳಿಂದ ಪವಾಡ ಸದೃಶ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕದ್ರಾ ಜಲಾಶಯದಿಂದ ನೀರು ಹೊರಕ್ಕೆ: ಇನ್ನು ಜಿಲ್ಲೆಯ ಶಿರಸಿ, ಸಿದ್ದಾಪುರದಲ್ಲಿಯೂ ಗಾಳಿ ಸಹಿತ ಮಳೆಯಾಗಿದ್ದು, ಕರಾವಳಿ ಭಾಗದಲ್ಲಿ ಬಿಟ್ಟು ಬಿಟ್ಟು ಸಣ್ಣ ಪ್ರಮಾಣದಲ್ಲಿ ಗಾಳಿ ಸಹಿತ ಮಳೆಯಾಗಿದೆ. 34.50 ಮೀ ಗರಿಷ್ಠ ಸಾಮರ್ಥ್ಯ ಹೊಂದಿರುವ ಕದ್ರಾ ಜಲಾಶಯ 30.93 ಮೀಟರ್ ತುಂಬಿದ ಕಾರಣ ಜಲಾಶಯದಿಂದ ನೀರು ಬಿಡುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಲ್ಲದೇ ಪ್ರಯೋಗಾರ್ಥವಾಗಿ ಒಂದು ಗೇಟ್ ಮೂಲಕ ನೀರು ಹೊರಬಿಡಲಾಗಿದೆ.

ಕರಡಿ ದಾಳಿಗೆ ರೈತ ಬಲಿ :ಮುಂಡಗೋಡ ತಾಲೂಕಿನ ಮರಗಡಿಯಲ್ಲಿ ಕರಡಿ ದಾಳಿಯಿಂದ ಓರ್ವ ರೈತ ಮೃತಪಟ್ಟಿದ್ದಾನೆ. ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿ ಭೀಕರವಾಗಿ ಕೊಂದು ಹಾಕಿದೆ. ಮರಗಡಿ ಗೌಳಿ ದಡ್ಡಿಯ ಜಿಮ್ಮು ವಾಘು ತೋರವತ್(58) ಕರಡಿ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾರೆ.

ಅಂದಹಾಗೆ, ನಿನ್ನೆ ಗುರುವಾರ ಈತ ಕೆಲಸಕ್ಕಾಗಿ ಗದ್ದೆಗೆ ಹೋಗಿದ್ದರು. ಆದರೆ, ಸಂಜೆ ಕೆಲಸ ಮುಗಿಸಿಕೊಂಡು ವಾಪಸ್ ಬರಬೇಕಿದ್ದ ರೈತ ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ, ಕುಟುಂಬಸ್ಥರು ಹುಡುಕಲು ಹೋಗಿದ್ದಾರೆ. ಈ ವೇಳೆ, ಕರಡಿ ದಾಳಿಯಿಂದ ಮೃತಪಟ್ಟು ಬಿದ್ದಿರೋದು ಕಂಡು ಬಂದಿದೆ.ಕರಡಿ ದಾಳಿಯಿಂದ ಮೃತಪಟ್ಟ ಘಟನೆ ಅರಿವಾದ ತಕ್ಷಣವೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಬೈಕ್​ಗೆ ಡಿಕ್ಕಿ ಹೊಡೆದಿರುವ ಬಸ್​

ಬೈಕ್ ಸವಾರರು ಅದೃಷ್ಟವಶಾತ್ ಪಾರು:ಬೈಕ್‌ಗೆ ಹಿಂಬದಿಯಿಂದ‌ ಬಂದ ಬಸ್ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಇಬ್ಬರು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಎಲ್‌ಐಸಿ ಕ್ರಾಸ್ ಬಳಿ ನಡೆದಿದೆ. ಎಲ್‌ಐಸಿ ಪ್ರತಿನಿಧಿ ಸಂದೇಶ ನಾಯ್ಕ ಹಾಗೂ ಆತನ ಸ್ನೇಹಿತ ಬಚಾವಾದ ಬೈಕ್ ಸವಾರಾಗಿದ್ದಾರೆ.

ರಸ್ತೆಯಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಕುಮಟಾದಿಂದ ಭಟ್ಕಳ ಕಡೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಹಿಂಬದಿಯಿಂದ ಗುದ್ದಿದೆ. ಡಿಕ್ಕಿ ರಭಸಕ್ಕೆ ಡಿವೈಡರ್ ಮೇಲೆ ಹತ್ತಿದ್ದು, ಬೈಕ್ ಸವಾರ ಬಸ್ ಕೆಳಗೆ ಸಿಲುಕಿಕೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಹಾಸನ... ಕರಡಿ ದಾಳಿ ವೃದ್ಧ ರೈತನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ABOUT THE AUTHOR

...view details