ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಬಳಿ ಎರಡು ಜಿಂಕೆಗಳ ಕಳೇಬರ ಪತ್ತೆಯಾಗಿವೆ.
ಒಂದು ಜಿಂಕೆ ಬೇಟೆಯಾಡಿದ ಪರಿಣಾಮದಿಂದ ಸಾವನ್ನಪ್ಪಿದ್ದರೆ, ಮತ್ತೊಂದು ಜಿಂಕೆ ನಾಯಿ ದಾಳಿಯಿಂದ ಮೃತಪಟ್ಟಿದೆ. ಒಂದು ಜಿಂಕೆ ಮೂರ್ನಾಲ್ಕು ದಿನಗಳ ಹಿಂದೆಯೇ ಬೇಟೆಗಾರರ ಗುಂಡಿಗೆ ಬಲಿಯಾಗಿದ್ದು, ಅದರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇನ್ನೊಂದು ಜಿಂಕೆ ಮೇಲೆ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಇದನ್ನು ಕಂಡ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಣೆ ಮಾಡಿದ್ದರೂ ಸಹ ತೀವ್ರವಾಗಿ ಗಾಯಗೊಂಡಿದ್ದ ಅದು ಬದುಕುಳಿದಿಲ್ಲ. ಈ ಎರಡು ಜಿಂಕೆಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯ ಇಲಾಖೆಯವರು ಅಂತ್ಯಕ್ರಿಯೆ ನಡೆಸಿದ್ದಾರೆ.
ಬೇಟೆಗಾರರಿಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ.