ಕಾರವಾರ (ಉತ್ತರ ಕನ್ನಡ) : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರನ್ನು ವಂಚಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ದೆಹಲಿ ಮೂಲದ ವ್ಯಕ್ತಿಯೋರ್ವನನ್ನು ಕಾರವಾರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಸೈಯದ್ ಜುನೈದ್ ಎಂದು ಗುರುತಿಸಲಾಗಿದೆ.
ಕಾರವಾರ ತಾಲೂಕಿನ ಹಳಗಾ, ಬೊಳಕಿದ್ದಾ ನಿವಾಸಿ ಕರುಣಾಕರ ತಳೇಕರ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಬಂದ Disney Cruise Line ಎಂಬ ಹೆಸರಿನ ಶಿಪ್‌ನಲ್ಲಿ ಉದ್ಯೋಗ ಇರುವ ಬಗೆಗಿನ ಜಾಹೀರಾತು ನೋಡಿ ಅದರಲ್ಲಿದ್ದ ಮೊಬೈಲ್ ನಂಬರಿಗೆ ಸಂಪರ್ಕಿಸಿದ್ದಾರೆ. ಆಗ ಸೈಯದ್ ಆನ್ಲೈನ್ ಮೂಲಕ ಸಂದರ್ಶನ ಮಾಡಿದ್ದಾನೆ. ಬಳಿಕ ಕರುಣಾಕರ್ ಅವರನ್ನು ಶಿಪ್‌ನ ಸೀ-ಮೆನ್ ಹುದ್ದೆಗೆ ಆಯ್ಕೆ ಮಾಡಿ, ನಂತರದಲ್ಲಿ ಶಿಪ್‌ನಲ್ಲಿ ಉನ್ನತ ಹುದ್ದೆಯಾದ ಟಿಪ್ ಆಫೀಸರ್ ಹುದ್ದೆಗೆ ಮುಂಬಡ್ತಿ ನೀಡುವುದಾಗಿ ನಂಬಿಸಿ ಆಮಿಷವೊಡ್ಡಿದ್ದಾನೆ. ಅಷ್ಟೇ ಅಲ್ಲದೇ ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಆನ್ಲೈನ್ ಮೂಲಕ ನಡೆಸಿ ಇದಕ್ಕಾಗಿ ತಗುಲುವ ವೆಚ್ಚವನ್ನು ಹಂತ ಹಂತವಾಗಿ 75,19,138 ಜಮಾ ಮಾಡಿಸಿಕೊಂಡಿದ್ದಾನೆ. ನೌಕರಿ ನೀಡದೇ ಮೋಸ ಮಾಡಿದ ಬಗ್ಗೆ ಕರುಣಾಕರ ಸಿ.ಇ.ಎನ್ ಅಪರಾಧಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗಾಗಿ ಕಾರವಾರ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕೆ.ಎಂ.ಷರೀಫ್ ಇವರ ನೇತೃತ್ವದಲ್ಲಿ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಇಂತಹ ಯಾವುದೇ ಅಪರಿಚಿತ ಇಮೇಲ್, ಮೊಬೈಲ್ ಕರೆಗಳು, ವಾಟ್ಸಾಪ್ ಸಂದೇಶ, ಉದ್ಯೋಗದ ಫೇಸಬುಕ್ ಜಾಹೀರಾತು, ಬಹುಮಾನ ಬಂದಿದೆ ಎಂಬ ಸಂದೇಶ, ಲಕ್ಕಿ ಡ್ರಾನಲ್ಲಿ ವಿಜೇತರಾಗಿದ್ದಾರೆಂದು ಎಂಬೆಲ್ಲ ಸಂಗತಿಗಳನ್ನು ನಂಬಲು ಹೋಗಬೇಡಿ. ಕೆಲವರು ಇಂತಹ ಆಮಿಷಗಳ ಮೂಲಕ ಮೋಸ ಮಾಡುವುದರಿಂದ ಸಾರ್ವಜನಿಕರು ಎಚ್ಚರವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.