ಶಿರಸಿ: ಭಾರತದಲ್ಲಿ ರಾಷ್ಟ್ರಗೀತೆಗೆ ಮಹತ್ವದ ಸ್ಥಾನವಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯುವತಿಯೊಬ್ಬರು ಒಂದೇ ದಿನದಲ್ಲಿ ಲೀಫ್ ಕಲೆ ಮೂಲಕ ಹಿಂದಿಯಲ್ಲಿ ರಾಷ್ಟ್ರಗೀತೆ ಬರೆದು 'ಇಂಡಿಯಾ ಬುಕ್ ಆಫ್ ರೆಕಾರ್ಡ್' ಪುಸ್ತಕದಲ್ಲಿ ದಾಖಲೆ ಬರೆಯುವ ಮೂಲಕ ತನ್ನ ರಾಷ್ಟ್ರಪ್ರೇಮವನ್ನು ಮೆರೆದಿದ್ದಾರೆ.
ಗ್ರಾಮೀಣ ಪ್ರದೇಶದ ರೈತ ಕುಟುಂಬದಿಂದ ಬಂದಿರುವ ಸಿದ್ದಾಪುರದ ಬಿಳಗಿ ಸಮೀಪದ ಹೊಸಮಂಜು ಗ್ರಾಮದ ತೃಪ್ತಿ ಮಂಜುನಾಥ ನಾಯ್ಕ, ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಬರೆದಿದ್ದಾರೆ. ಕಾರವಾರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಮೊದಲಿನಿಂದಲೂ ಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿ ಹಲವು ವಿಧದ ಕಲಾಕೃತಿಗಳನ್ನು ರಚಿಸಿದ್ದಾರೆ.
ಯಲ್ಲಾಪುರದಲ್ಲಿ ಎಂ.ಕಾಂ ಓದುವ ವೇಳೆ ಎಲೆಯಲ್ಲಿ ಚಿತ್ರವನ್ನು ರಚಿಸುವ ಲೀಫ್ ಆರ್ಟ್ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದ ಅವರು, ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2022 ರ ಮಾ.19ರಂದು ಲೀಫ್ ಕಲೆಯಲ್ಲಿ ರಾಷ್ಟ್ರಗೀತೆ ಬರೆದಿದ್ದು, ಅದಕ್ಕೆ ಸಂಬಂಧಿಸಿದ ಫಲಕ ಹಾಗೂ ಪ್ರಮಾಣ ಪತ್ರ ಇತ್ತೀಚಿಗೆ ಇವರ ಮನೆ ತಲುಪಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ ತೃಪ್ತಿ ಚಿತ್ರ ಕಲಾ ಪ್ರಕಾರಗಳಲ್ಲಿ ಲೀಫ್ ಕಲೆ ವಿಶಿಷ್ಟವಾಗಿದೆ. ಹೆಸರೇ ಸೂಚಿಸುವಂತೆ ಎಲೆಗಳನ್ನು ಬಳಸಿಕೊಂಡು ಮಾಡುವ ಒಂದು ಕಲಾ ಪ್ರಕಾರವಾಗಿದೆ. ನಮಗೆ ಬೇಕಾಗಿರುವ ಚಿತ್ರವನ್ನು ಬಿಡಿಸಿ ಉಳಿದ ಎಲೆಯ ಭಾಗವನ್ನು ಕತ್ತರಿಸಿ ತೆಗೆಯಲಾಗುತ್ತದೆ. ಇಂತಹ ಕ್ಲಿಷ್ಟ ಕಲೆಯಲ್ಲಿ ಇಂಡಿಯಾ ಬುಕ್ ಆಫ್ ರೆರ್ಕಾಡ್ ಪುಸ್ತಕದಲ್ಲಿ ನನ್ನ ಹೆಸರು ದಾಖಲಾಗಿರುವುದು ಸಂತಸ ತಂದಿದೆ. ನಾನು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡಿದ್ದೇನೆ. ಲೀಫ್ ಕಲೆಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕೆಂದಿದ್ದೇನೆ. ಯಾರೇ ಬಂದು ಈ ಕಲೆಯನ್ನು ಕಲಿಸಿಕೊಡಿ ಎಂದರೆ ಅಂತವರಿಗೆ ಕಲಿಸುತ್ತೇನೆ. ಈ ಕಲೆ ಮತ್ತಷ್ಟು ಪ್ರಚಲಿತ ಆಗಬೇಕು ಎಂಬುದು ತೃಪ್ತಿಯ ಆಸೆ.
ಎಲೆ ಮೇಲೆ ಅರಳಿದ ರಾಷ್ಟ್ರಗೀತೆ ಇದನ್ನೂ ಓದಿ:ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಸೋನಾರ್ ಬಾಬಾನನ್ನು ಹೊಡೆದ ಕೊಂದ ಜನ!