ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗವನ್ನು ತಡೆಗಟ್ಟಲು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಜಿಲ್ಲೆಯ ಜನತೆಯ ಹಿತದೃಷ್ಟಿಯಿಂದ ‘ತ್ರಿಸೂತ್ರ’ವನ್ನು ಘೋಷಣೆ ಮಾಡಿದ್ದಾರೆ. ಈ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು, ಪೊಲೀಸರಿಗೆ ಅವರು ಸೂಚನೆ ನೀಡಿದ್ದಾರೆ.
ಈ ಕುರಿತು ಶಿರಸಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ಜಿಲ್ಲೆಯ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಆಕ್ಸಿಜನ್ ಬೆಡ್ಗಳನ್ನು ಹೆಚ್ಚಳ ಮಾಡುವುದು, ಹೊಸ ಮದುವೆಗೆ ಅವಕಾಶ ನೀಡದಿರುವುದು ಹಾಗೂ ಜಿಲ್ಲೆಯ 19 ಗ್ರಾಮ ಪಂಚಾಯಿತಿ ಮತ್ತು 2 ನಗರ ಪ್ರದೇಶವನ್ನು ವಿಶೇಷ ಕಂಟೈನ್ಮೆಂಟ್ ಝೋನ್ ಮಾಡುವ ಮೂಲಕ ಕೊರೊನಾ ತಡೆಗಟ್ಟಲು ವಿಶೇಷ ಕ್ರಮಗಳನ್ನು ಅನುರಿಸಬೇಕು ಎಂದರು.
ಆಕ್ಸಿಜನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ:
ಜಿಲ್ಲೆಯಲ್ಲಿ ಕೋವಿಡ್ ಪ್ರಾಬಲ್ಯ ಹೆಚ್ಚಾಗಿದೆ. ಕೊರೊನಾ ಪೀಡಿತರನ್ನು ಪರೀಕ್ಷೆಗೆ ಹೆಚ್ಚು ಒಳಪಡಿಸಿದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಹಾಸಿಗೆ ಕೊರತೆ ಇಲ್ಲ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ಐಸಿಯು ಹಾಸಿಗೆಗಳನ್ನು ಹೆಚ್ಚಿಸುವ ಅಗತ್ಯವಿದೆ. ಆದ್ದರಿಂದ ಕಾರವಾರದ ಕ್ರಿಮ್ಸ್ನಲ್ಲಿ 25 ಆಕ್ಸಿಜನ್ ಹಾಸಿಗೆಗಳನ್ನು ಹೆಚ್ಚುವರಿಯಾಗಿ ಮಾಡಲಾಗುತ್ತದೆ. ಅದೇ ರೀತಿ ಘಟ್ಟದ ಮೇಲಿನ ಯಲ್ಲಾಪುರ, ಶಿರಸಿ ಹಾಗೂ ಹಳಿಯಾಳದಲ್ಲಿ ತಲಾ 10 ಆಕ್ಸಿಜನ್ ಆಸ್ಪತ್ರೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇಷ್ಟು ದಿನಗಳ ಕಾಲ ನಗರ ಪ್ರದೇಶಕ್ಕೆ ಹಬ್ಬಿದ್ದ ಕೊರೊನಾ ಈಗ ಗ್ರಾಮೀಣ ಭಾಗದಲ್ಲಿ ವಿಸ್ತರಿಸಿದೆ. ಇದಕ್ಕೆ ಮದುವೆ ಮನೆಗಳು ಮೂಲ ಕಾರಣವಾಗಿದೆ. ಆದ ಕಾರಣ ಮೇ.15 ರ ವರೆಗೆ ಮದುವೆಗೆ ಅವಕಾಶ ನೀಡಿರುವುದಕ್ಕೆ 40 ರಿಂದ 20 ಕ್ಕೆ ಜನರ ಮಿತಿ ಇಳಿಸಲಾಗಿದ್ದು, ಮುಂದಿನ ಆದೇಶ ಬರುವವರೆಗೆ ಹೊಸ ಮದುವೆಗೆ ಯಾವುದೇ ಅವಕಾಶ ನೀಡಲಾಗುವುದಿಲ್ಲ. ಈ ಕುರಿತು ಅಧಿಕೃತ ಆದೇಶವನ್ನು ಜಿಲ್ಲಾಡಳಿತದಿಂದ ಹೊರಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.