ಕಾರವಾರ: ದೇಶದಿಂದ ದೇಶಕ್ಕೆ ಸೈಕಲ್, ಬೈಕ್‌ಗಳಲ್ಲಿ ಯಾತ್ರೆ ಹೊರಡುವವರು, ಪ್ರಪಂಚ ಪರ್ಯಟನೆ ಮಾಡುವವರನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿ ಮೂವರು ಸ್ನೇಹಿತರು ನಡೆದುಕೊಂಡೇ ದೇಶ ಸುತ್ತಲು ತೀರ್ಮಾನಿಸಿದ್ದಾರೆ. ಅದು ಮೂರು ದೇಶಗಳನ್ನು ಸುತ್ತುವ ಬರೋಬ್ಬರಿ 13 ರಿಂದ 15 ಸಾವಿರ ಕಿ.ಮೀ ನಡೆದೇ ಸಾಗುವ ಸಂಕಲ್ಪ.
ಕೇರಳದ ಕಾಸರಗೋಡಿನ (Kasaragod) ಜುಬೈರ್, ಸಿನಾನ್ ಹಾಗು ತ್ರಿವೇಂದ್ರಮ್‌ನ ನವನೀತ್ ಎಂಬ ಮೂವರು ಯುವಕರು ಈ ಪಾದಯಾತ್ರೆ ಹೊರಟವರು (Three friends on a Hiking Trip from Kasaragod). ಜುಬೈರ್ ದುಬೈನಲ್ಲಿ ಉದ್ಯೋಗದಲ್ಲಿದ್ದ. ಆದರೆ ಈ ಪಾದಯಾತ್ರೆಗಾಗಿ (Hiking) ಉದ್ಯೋಗ ತ್ಯಜಿಸಿದ್ದಾನೆ. ನವನೀತ್ ಕಂಪ್ಯೂಟರ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಇನ್ನೋರ್ವ ಸಿನಾನ್ ಎಂಬಾತ ಕಾಸರಗೋಡಿನ ಸ್ಥಳೀಯ ವೆಬ್ಸೈಟ್ವೊಂದರಲ್ಲಿ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಒಂದು ದಿನದ ಹಿಂದಷ್ಟೇ ಕೋವಿಡ್ ಲಸಿಕೆ ಪಡೆದಿದ್ದ ಇವರು ಮಂಗಳೂರು, ಉಡುಪಿ ಮೂಲಕ ಶುಕ್ರವಾರ ಅಂಕೋಲಾ ತಲುಪಿದ್ದರು. ಲಸಿಕೆಯ ಪರಿಣಾಮವಾಗಿ ಮೂವರಿಗೂ ಕೊಂಚ ಸುಸ್ತಾಗಿತ್ತು. ನವನೀತ್‌ಗೆ ತಲೆಸುತ್ತು ಬಂದು, ರಕ್ತದೊತ್ತಡದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ಅಂಕೋಲಾ ತಲುಪಿದ ಇವರು, ಅಲ್ಲಿ ಡಾ.ಸಂಜು ನಾಯ್ಕ ಅವರ ನೆರವಿನೊಂದಿಗೆ ಹಾಗು ಕಾರವಾರದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕರನ್ನು ಮೊಬೈಲ್ ಕರೆ ಮೂಲಕ ಸಂಪರ್ಕಿಸಿ ಸ್ಥಳೀಯವಾಗಿ ವೈದ್ಯರನ್ನು ಭೇಟಿ ಮಾಡಿ ರಾತ್ರಿ ಕಾರವಾರಕ್ಕೆ ಬಂದಿದ್ದಾರೆ.
ಆರೋಗ್ಯ ಸರಿ ಇರದ ಕಾರಣ ವಾಹನದಲ್ಲಿ ಆಸ್ಪತ್ರೆಗೆ ಬಿಡುತ್ತೇವೆಂದು ಹೇಳಿದರೂ ನಡೆದುಕೊಂಡೇ ಹೋಗುತ್ತೇವೆಂದು ಆಸ್ಪತ್ರೆಗೆ ತೆರಳಿ, ಬಳಿಕ ಅಲ್ಲಿಂದ ಕಾರವಾರಕ್ಕೆ ಬಂದಿದ್ದಾರೆ. ಕಾರವಾರದ ಪ್ರವಾಸಿ ಮಂದಿರದಲ್ಲಿ ಆಶ್ರಯ ಪಡೆದಿರುವ ಮೂವರನ್ನು ಮಾಧವ ನಾಯಕ ಅವರು ಲಯನ್ಸ್ ಕ್ಲಬ್‌ನ ಅಲ್ತಾಫ್ ಶೇಖ್ ಹಾಗು ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯ ರಾಮಾ ನಾಯ್ಕ ಅವರೊಂದಿಗೆ ಭೇಟಿಯಾಗಿ, ಆರೋಗ್ಯದ ಕುರಿತು ವಿಚಾರಿಸಿದರು.