ಕಾರವಾರ:ಮುಂಬರುವ ರಾಜ್ಯ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು, ಸರ್ಕಾರಿ ನೌಕರರಾಗಿ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಾರಿಗೆ ನೌಕರರ ಕೂಟ, ಪ.ಜಾತಿ, ಪ.ಪಂಗಡ ನೌಕರರ ಸಂಘ, ಪ.ಜಾತಿ, ಪ.ಪಂಗಡ ನೌಕರರು ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ಕಾರವಾರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ನೌಕರರು, ‘ಆಂಧ್ರ ಪ್ರದೇಶ ಮಾದರಿಯಲ್ಲಿ ನಮ್ಮನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ', ‘ನಮ್ಮ ಹಕ್ಕಿಗಾಗಿ ನಮ್ಮ ಹೋರಾಟ’, ‘ನಮ್ಮ ಹಕ್ಕು ನಮಗೆ ಕೊಡಿ’ ಎಂಬ ಭಿತ್ತಿಫಲಕ ಪ್ರದರ್ಶಿಸಿದರು.
ಕಾರವಾರದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡುವಂತೆ ದಶಕದಿಂದ ಹೋರಾಟಗಳು ನಡೆಯುತ್ತಿವೆ. ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡಿದೆ. ರಾಜ್ಯ ಸರ್ಕಾರ ಸಹ ಇದೇ ಮಾದರಿ ಅನುಸರಿಸಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರಿ ನೌಕರರಾಗಿ ಮಾಡುವ ಸಂಬಂಧ ಅಧ್ಯಯನ ಮಾಡಲು ರಚಿಸಿದ್ದ ಉನ್ನತ ಸಮಿತಿ, ಸರ್ಕಾರಕ್ಕೆ ವರದಿ ಸಲ್ಲಿಸಲು ವಿಳಂಬ ಮಾಡುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ 2020-21ನೇ ಸಾಲಿನ ಬಜೆಟ್‌ನಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಘೋಷಿಸಬೇಕೆಂದು ಒತ್ತಾಯಿಸಿದರು.
ಅಂತರ್ ನಿಗಮ ವರ್ಗಾವಣೆಯಲ್ಲಿ ಬೇರೆ ನಿಗಮಗಳಿಗೆ ವರ್ಗಾವಣೆಗೊಂಡಿರುವ, ಸಾಕಷ್ಟು ನೌಕರರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಈ ನಡುವೆ ವಾಯವ್ಯ ಸಾರಿಗೆ ನಿಗಮ ಚಾಲಕ ಕಂ ನಿರ್ವಾಹಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅಂತರ್ ನಿಗಮ ವರ್ಗಾವಣೆ ಪೂರ್ಣಗೊಳ್ಳದೇ, ಇರುವಾಗ ನೇಮಕಾತಿಗೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ನೇಮಕಾತಿ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪಾಳಿ ಮುಗಿದ ನೌಕರರು, ರಜೆಯಲ್ಲಿದ್ದ ನೌಕರರು ಮಾತ್ರ ಜಾಥಾದಲ್ಲಿ ಭಾಗಿಯಾಗಿದ್ದರು.