ಕಾರವಾರ (ಉ.ಕ): 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿ ಮಾಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ ಉತ್ತರ ಕನ್ನಡ ಜಿಲ್ಲೆಗೆ ತಟ್ಟಿತ್ತು.
ಬಸ್ ಸಂಚಾರವಿಲ್ಲದೇ ದಿನವಿಡಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೇರೆ ಸ್ಥಳಕ್ಕೆ ತೆರಳಬೇಕಾಗಿದ್ದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೇ ನಿಲ್ದಾಣದಲ್ಲಿ ಪರದಾಡುವಂತಾಗಿತ್ತು.
ಮಂಗಳೂರು ತೆರಳಬೇಕಿದ್ದ ಕುಟುಂಬವೊಂದು ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೇ ಪರದಾಟ ನಡೆಸುವಂತಾಗಿತ್ತು. ಇನ್ನು ಹಳಿಯಾಳಕ್ಕೆ ಹತ್ತಿರದ ಸಂಬಂಧಿಕರ ಮದುವೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವರಿಗೆ ಬಸ್ ಇಲ್ಲದ ಕಾರಣ ತೆರಳಲಾಗದೇ ವಾಪಸಾಗುತ್ತಿರುವುದು ಸಾಮಾನ್ಯ ಎಂಬಂತಾಗಿತ್ತು.
ಉತ್ತರ ಕನ್ನಡಕ್ಕೂ ತಟ್ಟಿದ ಸಾರಿಗೆ ಮುಷ್ಕರದ ಬಿಸಿ ಇನ್ನು ಸಾರಿಗೆ ನೌಕರರ ಮುಷ್ಕರ ಮುಂಚಿತವಾಗಿಯೇ ಅರಿತ ಜಿಲ್ಲಾಡಳಿತ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಖಾಸಗಿ ವಾಹನಗಳ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದರು. ಆದರೆ, ಕೆಲ ವಾಹನಗಳ ಮೂಲಕ ಸ್ಥಳೀಯವಾಗಿ ಸೇವೆ ದೊರೆತಿದೆಯಾದರೂ ದೂರದ ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಇಲ್ಲದೇ ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಸಾರಿಗೆ ನೌಕರರ ಮುಷ್ಕರ 2ನೇ ದಿನವು ಮುಂದುವರೆಯುವ ಸಾಧ್ಯತೆ ದಟ್ಟವಾಗಿದ್ದು, ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗಾಗುತ್ತಿರುವ ಸಮಸ್ಯೆ ತಪ್ಪಿಸುವಂತೆ ಪ್ರಯಾಣಿಕರಾದ ಗುರುನಾಥ ನಾಯ್ಕ ಆಗ್ರಹಿಸಿದ್ದಾರೆ.
ಒಟ್ಟಾರೆ ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರಿಂದ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು. ಮತ್ತೆ ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದರಿಂದ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ತೊಂದರೆ ಅನುಭವಿಸಬೇಕಾಗಿದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ.