ಕಾರವಾರ: ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಸಾಂಪ್ರದಾಯಿಕವಾಗಿ ಮೀನು ಬೇಟೆ ನಡೆಸಲಾಗುತ್ತದೆ. ಅದರಲ್ಲಿಯೂ ದಡದಲ್ಲೇ ನಿಂತು ಬಲೆ ಹಾಕಿ ಮೀನು ಹಿಡಿಯುವ 'ಏಂಡಿ ಮೀನುಗಾರಿಕೆ'ಯನ್ನು ಮಳೆಗಾಲದ ಅವಧಿಯಲ್ಲಿ ಮಾತ್ರ ಮಾಡಲಾಗುತ್ತದೆ. ಕಳೆದೊಂದು ತಿಂಗಳಿನಿಂದ ಕಡಲ ತೀರದಲ್ಲಿ ಭಾರಿ ಮಳೆಯಿಂದಾಗಿ ಅಲೆಗಳ ಅಬ್ಬರ ಹೆಚ್ಚಿದ್ದು ಸಾಂಪ್ರದಾಯಿಕ ಮೀನುಗಾರಿಕೆ ಪ್ರಾರಂಭವಾಗಿರಲಿಲ್ಲ. ಇದೀಗ ಮಳೆ ಬಿಡುವು ನೀಡಿದ ಬೆನ್ನಲ್ಲೇ ಮೀನುಗಾರಿಕೆ ಚುರುಕುಗೊಂಡಿದೆ.
ದಡ ಮೀನುಗಾರಿಕೆಯಾದ ಏಂಡಿ ಬಲೆಗೆ ಹೇರಳ ಪ್ರಮಾಣದಲ್ಲಿ ಮೀನುಗಳು ಬಿದ್ದಿವೆ. ಸಾಮಾನ್ಯವಾಗಿ ಯಾಂತ್ರಿಕ ಮೀನುಗಾರಿಕೆ ಸ್ಥಗಿತಗೊಳ್ಳುವ ಜೂನ್, ಜುಲೈ ತಿಂಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುತ್ತದೆ. ಮಳೆಗಾಲದ ಸಂದರ್ಭದಲ್ಲಿ ಮೀನುಗಳು ಮರಿ ಇಡುತ್ತಿದ್ದು ದಡದ ಸಮೀಪದಲ್ಲಷ್ಟೇ ಮೀನುಗಾರಿಕೆಗೆ ಅವಕಾಶವಿದೆ. ಹೀಗಾಗಿ ಮಳೆಯಿಂದಾಗಿ ಮೀನುಗಾರಿಕೆ ಮಾಡಲಾಗದೇ ಕಂಗಾಲಾಗಿದ್ದ ಸಾಂಪ್ರದಾಯಿಕ ಮೀನುಗಾರರು ಇದೀಗ ತೀರದಲ್ಲಿ ನಿಂತು ಏಂಡಿ ಬಲೆ ಬೀಸಿ ಮೀನು ಶಿಕಾರಿಯಲ್ಲಿ ತೊಡಗಿದ್ದಾರೆ.
ಏಂಡಿ ಬಲೆ ಮೀನುಗಾರಿಕೆ ನಡೆಸಲು ಸರಿಸುಮಾರು 40 ರಿಂದ 100 ಮಂದಿಯ ಅಗತ್ಯವಿರುತ್ತದೆ. ದಡದಲ್ಲಿ ನಿಂತು ಒಂದು ಬದಿಯಿಂದ ಬೋಟ್ ಮೂಲಕ ತೀರ ಪ್ರದೇಶದಲ್ಲಿ ಬಲೆ ಬಿಡುತ್ತಾ ದಡದ ಮತ್ತೊಂದು ಭಾಗಕ್ಕೆ ಬಂದು ನಿಲ್ಲುತ್ತಾರೆ. ಬಳಿಕ ಎರಡೂ ತುದಿಯಲ್ಲಿ ನಿಲ್ಲುವ ಮೀನುಗಾರರು ಹಂತ ಹಂತವಾಗಿ ಬಲೆಯನ್ನು ಎರಡೂ ಕಡೆಗಳಿಂದ ಎಳೆಯುತ್ತಾರೆ. ತೀರ ಪ್ರದೇಶಕ್ಕೆ ಬಂದ ಮೀನುಗಳು ಬಲೆಯಲ್ಲಿ ಸಿಲುಕಿಕೊಳ್ಳುತ್ತವೆ.