ಕಾರವಾರ:ಹಣ ಮಾಡೋದಕ್ಕೆ ಸಾವಿರಾರು ದಾರಿಗಳಿವೆ. ಆದರೂ ಜನರು ಸುಲಭವಾಗಿ ಹಣ ಗಳಿಕೆ ಮಾಡುವ ದಾರಿಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಹಣದ ದುರಾಸೆಗೆ ಬಿದ್ದು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡುವ ಆ್ಯಪ್ ಅನ್ನು ನಂಬಿಕೊಂಡು ಹಲವಾರು ಮಂದಿ ಕೋಟ್ಯಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿ ಇದೀಗ ಪಂಗನಾಮ ಹಾಕಿಸಿಕೊಂಡು ತಲೆ ಚಚ್ಚಿಕೊಳ್ಳುವಂತಾಗಿದೆ.
ಬಿಟ್ ಕಾಯಿನ್, ಎಕ್ಸ್‌ಆರ್‌ಪಿ, ಇಥಿರಿಯಂನಂತಹ ಕ್ರಿಪ್ಟೋ ಕರೆನ್ಸಿಗಳ ಮೇಲಿನ ಹೂಡಿಕೆ ಸಾಕಷ್ಟು ಲಾಭವನ್ನು ತಂದುಕೊಟ್ಟಿವೆ ಅನ್ನೋದು ಬಹುತೇಕರಿಗೆ ತಿಳಿದಿದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಹೀಗೆ ಹೆಚ್ಚು ಹಣ ನೀಡುವ ಆಸೆ ತೋರಿಸಿ ಸಾವಿರಾರು ಮಂದಿಯಿಂದ ಹಣ ಹೂಡಿಸಿಕೊಂಡಿದ್ದ ಟವರ್ ಎಕ್ಸ್ಚೇಂಜ್ ಹೆಸರಿನ ಆ್ಯಪ್ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ವರದಿಯಾಗಿದೆ.
ಕಂಪನಿ ಹೇಳಿದ್ದೇನು? ಮಾಡಿದ್ದೇನು?
ಈ ಟವರ್ ಎಕ್ಸ್ಚೇಂಜ್ ಟ್ರೇಡಿಂಗ್ ಆ್ಯಪ್ ಅಸಲಿಗೆ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡೋದಾಗಿ ಹೇಳಿಕೊಂಡಿತ್ತು. ಪ್ಲೇಸ್ಟೋರ್‌ನಲ್ಲಿ ಸಿಗದ ಈ ಆ್ಯಪ್ ಟ್ರೇಡಿಂಗ್‌ಗಾಗಿಯೇ ಸೃಷ್ಟಿಯಾಗಿರುವ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಮೂಲಕ ಮಾತ್ರ ಲಭ್ಯವಾಗುತ್ತದೆ. ಈ ಲಿಂಕ್ ಮೂಲಕ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ ಮೊದಲು ಕನಿಷ್ಠ ಐದು ಸಾವಿರ ಹಣವನ್ನು ವಾಲೆಟ್‌ಗೆ ಪಾವತಿ ಮಾಡಬೇಕು.
ಏನಿದು ಕ್ರಿಪ್ಟೋ ಕರೆನ್ಸಿ ಹೂಡಿಕೆ?
ಮೊದಲ ಹಂತವಾಗಿ ಈ ವಾಲೆಟ್‌ನಲ್ಲಿರುವ ಹಣದ ಶೇಕಡಾ 12 ರಷ್ಟು ಹಣವನ್ನು ಮಾತ್ರ ಕ್ರಿಪ್ಟೋ ಕರೆನ್ಸಿಗಳ ಮೇಲೆ ಹೂಡಿಕೆ ಮಾಡಬಹುದು. ಹೀಗೆ ಹೂಡಿಕೆ ಮಾಡಿದ ಹಣಕ್ಕೆ ದಿನಕ್ಕೆ ಶೇಕಡಾ 75ರಂತೆ ಲಾಭವನ್ನ ನೀಡುವ ಮೂಲಕ ಹೂಡಿಕೆದಾರರನ್ನು ಸೆಳೆಯಲಾಗಿತ್ತು.
ಹೀಗೆ ಬಂದ ಹಣವನ್ನು ಭಾರತೀಯ ಕರೆನ್ಸಿ ರೂಪದಲ್ಲಿ ಖಾತೆಗಳಿಗೆ ವರ್ಗಾಯಿಸಿಕೊಳ್ಳಲು ಸಹ ಅವಕಾಶ ನೀಡಿದ್ದು, ಇದನ್ನು ನಂಬಿದ ಸಾಕಷ್ಟು ಮಂದಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ್ದರು. ಆದರೆ ಈ ಆ್ಯಪ್ ಇದೀಗ ಸ್ಥಗಿತಗೊಂಡಿದ್ದು, ಜನರು ಹೂಡಿಕೆ ಮಾಡಿದ್ದ ಕೋಟ್ಯಂತರ ರೂಪಾಯಿ ಹಣವೂ ಸಿಗದಂತಾಗಿದೆ.