ಕಾರವಾರ:ಹೊಸ ವರ್ಷಾಚರಣೆ ವೇಳೆ ಕರಾವಳಿಯ ಕಡಲತೀರಗಳಲ್ಲಿ ನಿಷೇಧಾಜ್ಞೆ ಹೇರಿದ ಕಾರಣ ಅದೆಷ್ಟೋ ಪ್ರವಾಸಿಗರು ಸೇರಿದಂತೆ ಸ್ಥಳೀಯರು ನಿರಾಸೆ ಅನುಭವಿಸಿದ್ದರು. ಆದರೆ ಇದೀಗ ಪ್ರತಿನಿತ್ಯ ಸಂಜೆಯಾಗುತ್ತಿದ್ದಂತೆ ಕಡಲತೀರಗಳಿಗೆ ಜನ ಹರಿದು ಬರುತ್ತಿದ್ದು, ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.
ರೂಪಾಂತರ ಕೊರೊನಾ ಆತಂಕದ ಕಾರಣ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಐದು ತಾಲೂಕುಗಳ ಕಡಲತೀರಗಳಲ್ಲಿ ಡಿ.31ರ ಒಂದು ದಿನ ರಾತ್ರಿ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಜಿಲ್ಲಾಡಳಿತ ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್ ಹಾಕಿತ್ತು. ಸಂಜೆಯಾಗುತ್ತಿದ್ದಂತೆ ಪ್ರತಿನಿತ್ಯ ಕಡಲತೀರಕ್ಕೆ ಬಂದು ವಿಹರಿಸುತ್ತಿದ್ದ ಅದೆಷ್ಟೋ ಮಂದಿ ಸೇರಿದಂತೆ ಹೊಸ ವರ್ಷದ ಸಂಭ್ರಮಾಚರಣೆಗೆ ಆಗಮಿಸಿದ್ದ ಜನರು ಅಂದು ನಿರಾಸೆಯಿಂದಲೇ ವಾಪಸ್ ತೆರಳಿದ್ದರು. ರೂಪಾಂತರ ಕೊರೊನಾ ಆತಂಕ ಇರುವ ಹಿನ್ನೆಲೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂದ ಈ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹೇಳಿತ್ತು.