ಶಿರಸಿ(ಉತ್ತರ ಕನ್ನಡ): ಗುಜರಾತ್‌ನ ಮೊರ್ಬಿಯಲ್ಲಿ ಸೇತುವೆ ಕುಸಿದು ನೂರಾರು ಜನರು ಜಲಸಮಾಧಿ ಆಗಿದ್ದಾರೆ. ಮೃತದೇಹಗಳ ಪತ್ತೆ ಕಾರ್ಯ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲಿ ತೂಗು ಸೇತುವೆ ಮೇಲೆ ಕೆಲ ಪ್ರವಾಸಿಗರು ಕಾರು ಚಲಾಯಿಸಿ ಉದ್ಧಟತನ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್ ತೂಗು ಸೇತುವೆ ದುರಂತ ಹಸಿಯಾಗಿರುವಾಗಲೇ ಜಿಲ್ಲೆಯಲ್ಲಿ ಪುಂಡರ ತಂಡವೊಂದು ತೂಗು ಸೇತುವೆಯ ಮೇಲೆ ಕಾರು ಚಲಾಯಿಸಿ ಜನರ ಪ್ರಾಣಕ್ಕೆ ಸಂಚಕಾರ ತಂದ ಘಟನೆ ಜರುಗಿದೆ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯ ಮೇಲೆ ಅಪರಿಚಿತರು ಕಾರು ಚಲಾಯಿಸಿಕೊಂಡು ಬಂದಿದ್ದಾರೆ. ಇದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಕಾರಿನಲ್ಲಿದ್ದವರು ಅನುಚಿತವಾಗಿ ವರ್ತಿಸಿ, ದರ್ಪ ತೋರಿದ್ದಾರೆ ಎಂದು ಸ್ಥಳದಲ್ಲಿದ್ದ ಪ್ರವಾಸಿಗರು ದೂರಿದ್ದಾರೆ.
ಸೇತುವೆಯಲ್ಲಿ ಸಾಗಿ ಬಂದ ಕಾರನ್ನು ಸ್ಥಳೀಯರು ತಡೆದು, ಬಂದ ದಾರಿಗೆ ಹಿಂದಕ್ಕೆ (ರಿವರ್ಸ್ ಗೇರ್‌ನಲ್ಲಿ) ಕಳುಹಿಸಿದ್ದಾರೆ. ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು ನೂರಾರು ಜನ ಮೃತಪಟ್ಟ ದುರ್ಘಟನೆ ಸಂಭವಿಸಿದ್ದರೂ ಕೆಲವರು ಎಚ್ಚೆತ್ತುಕೊಂಡಿಲ್ಲ. ಕಾರು ಚಲಾಯಿಸಿ ಸೇತುವೆಗೆ ಹಾನಿಯಾಗಿ ಅಪಾಯವಾದರೆ ಯಾರು ಹೊಣೆಯಾಗುತ್ತಾರೆ ಎಂದು ಪ್ರವಾಸಿಗರು, ಸ್ಥಳೀಯರು ಪ್ರಶ್ನಿಸಿದ್ದಾರೆ.