ಕಾರವಾರ:ಗೋಕರ್ಣದಲ್ಲಿ ಕರ್ತವ್ಯನಿರತ ಗೃಹರಕ್ಷಕ ಸಿಬ್ಬಂದಿಯೊಬ್ಬರ ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಮುಂಡಗೋಡಿನ ರಾಘವೇಂದ್ರ ರಾಮಚಂದ್ರ ರಾಯ್ಕರ ಮತ್ತು ಶಿರಸಿಯ ಮಂಜುನಾಥ ವಿಜಯ ನಾಯ್ಕ ಎಂದು ಗುರುತಿಸಲಾಗಿದೆ. ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದು, ಕುಡಿದ ಅಮಲಿನಲ್ಲಿ ಒನ್ ವೇನಲ್ಲಿ ವಾಹನವನ್ನು ಚಲಾಯಿಸಿದ್ದರು. ಇದನ್ನು ತಡೆಯಲು ಮುಂದಾದ ಗೃಹರಕ್ಷಕ ಸಿಬ್ಬಂದಿ ಮಾತನ್ನು ಕೇಳದ ಆರೋಪಿಗಳು ಆತನನ್ನು ತಮ್ಮ ವಾಹನದಲ್ಲಿಯೇ ಸ್ವಲ್ಪ ದೂರದವರೆಗೆ ಏಳೆದೊಯ್ದು ದೂಡಿ ಪರಾರಿಯಾಗಿದ್ದರು. ಆದರೆ ಇದೆಲ್ಲವೂ ಅಲ್ಲಿಯ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ವಾಹನ ತಡೆದ ಹೋಮ್ಗಾರ್ಡ್ನನ್ನೆ ಹೊತ್ತೊಯ್ದ ಪ್ರವಾಸಿಗರು..! ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪ್ರವಾಸಿಗರ ವರ್ತನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಬಳಿಕ ಮುಂಡಗೋಡ ಚಾಲಕ ಹಾಗೂ ವಾಹನದ ಮಾಲೀಕ ರಾಘವೇಂದ್ರ ರಾಯ್ಕರ್ ಎಂಬುವರ ಬಗ್ಗೆ ಮಾಹಿತಿ ಪಡೆದು ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ರಾಘವೇಂದ್ರ ಮನೆಗೂ ಬಾರದೇ ತಲೆಮರೆಸಿಕೊಂಡಿದ್ದ. ಕ್ಞಮೆ ಕೇಳಿದರೆ ಪೊಲೀಸರು ಪ್ರಕರಣ ಕೈಬಿಡುತ್ತಾರೆ ಎಂಬ ನಂಬಿಕೆಯ ಮೇಲೆ ಸೋಮವಾರ ಕುಮಟಾ ಸಿಪಿಐ ಸಂತೋಷ ಶೆಟ್ಟಿ ಇವರ ಮುಂದು ಹಾಜರಾಗಿದ್ದಾರೆ. ಕೂಡಲೇ ಇಬ್ಬರನ್ನೂ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.