ಕಾರವಾರ (ಉ.ಕ): ಅನ್ಲಾಕ್ ಬಳಿಕ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರ ದಂಡೆೇ ಹರಿದುಬರುತ್ತಿದೆ. ಅದರಲ್ಲಿಯೂ ಕಡಲತೀರಗಳು ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿದ್ದು, ಮಸ್ತ್ ಎಂಜಾಯ್ ಮಾಡತೊಡಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಡಲ ಅಲೆಗಳು ಭೀಕರ ಸ್ವರೂಪ ತಳೆದಿದ್ದು, ಇದೀಗ ಪ್ರವಾಸಿಗರ ಪ್ರಾಣಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ.
ಜಿಲ್ಲೆಯ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರುಡೇಶ್ವರ, ಗೋಕರ್ಣ, ಹೊನ್ನಾವರದ ಕಡಲತೀರಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ದೊಡ್ಡವರೆನ್ನದೆ ಎಲ್ಲರೂ ನೀರನ್ನು ಕಂಡ ತಕ್ಷಣ ಏನು ಯೋಚಿಸದೇ ನೀರಿನಲ್ಲಿ ಇಳಿದು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು ಸಾಕಷ್ಟು ಅಪಾಯಕಾರಿಯಾಗಿದೆ.
ಅಲೆಗಳ ಆರ್ಭಟ ಕೂಡ ಜೋರಾಗಿದ್ದು, ಪ್ರವಾಸಿಗರ ಪ್ರಾಣಕ್ಕೆ ಕುತ್ತು ಬರುವ ಆತಂಕ ಇದೆ. ಈ ಹಿಂದೆ ಪ್ರತಿ ಕಡಲತೀರಗಳಲ್ಲಿ ಲೈಫ್ ಗಾರ್ಡ್ ಇರುತ್ತಿದ್ದರು. ಆದರೆ ಈ ಬಾರಿ ಕಡಲತೀರಗಳಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಕೆಲ ವೇಳೆ ಪೊಲೀಸರು ಬಂದು ಪ್ರವಾಸಿಗರಿಗೆ ಎಚ್ಚರಿಸಿ ನೀರಿಗಳಿಯದಂತೆ ಸೂಚಿಸಿದರೂ ಮತ್ತೆದೆ ಕಾರ್ಯದಲ್ಲಿ ನಿರತರಾಗಿದ್ದಾರೆ.