ಕಾರವಾರ(ಉತ್ತರ ಕನ್ನಡ) :ತನ್ನ ಒಡಲಾಳದುದ್ದಕ್ಕೂ ಪ್ರವಾಸಿ ತಾಣಗಳನ್ನೆ ಬಚ್ಚಿಟ್ಟುಕೊಂಡಿರುವ ಉತ್ತರಕನ್ನಡದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಬಳಿಕ ನೆಲಕಚ್ಚಿದ್ದ ಪ್ರವಾಸೋದ್ಯಮ ಇದೀಗ ಗಮನಾರ್ಹವಾಗಿ ಚಿಗುರೊಡೆದಿದ್ದು, ಇಲ್ಲಿನ ಕಡಲತೀರ, ಧಾರ್ಮಿಕ ಕ್ಷೇತ್ರ, ಜಲಸಾಹಸಿ ಕ್ರೀಡೆಯತ್ತ ಕಳೆದ ಒಂದು ವರ್ಷದ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ಪ್ರವಾಸಿಗರು ಆಕರ್ಷಿಸಿತರಾಗಿದ್ದಾರೆ.
ಹೌದು ಪ್ರವಾಸಿಗರ ಪಾಲಿಗೆ ಹಾಟ್ ಫೆವರೇಟ್ ಆಗುತ್ತಿರುವ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳು ದಿನದಿಂದ ದಿನಕ್ಕೆ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿವೆ. ಅದರಲ್ಲಿಯೂ ಇಲ್ಲಿನ ಮುರುಡೇಶ್ವರ, ಗೋಕರ್ಣ, ಕಾರವಾರ, ದಾಂಡೇಲಿ ಹೊಂ ಸ್ಟೇ ಹಾಗೂ ಜಲಸಾಹಸಿ ಕ್ರೀಡೆಗಳತ್ತ ಪ್ರವಾಸಿಗರ ದಂಡೆ ಹರಿದುಬರುತ್ತಿದೆ.
ಧಾರ್ಮಿಕ ಕ್ಷೇತ್ರವೂ ಆಗಿರುವ ಮುರುಡೇಶ್ವರಕ್ಕೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ಅತಿ ಎತ್ತರದ ಶಿವನ ವಿಗ್ರಹ, ಕಡಲತೀರ, ಜಲಸಾಹಸಿ, ಚಟುವಟಿಕೆ ಹಾಗೂ ಸ್ಕೂಬಾ ಡೈವಿಂಗ್ ಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಇನ್ನು 2019ರ ಕೋವಿಡ್ ಬಳಿಕ ಜಿಲ್ಲೆಯ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚುವಂತಾಗಿತ್ತು. ಪ್ರವಾಸೋದ್ಯಮವನ್ನೆ ನಂಬಿಕೊಂಡಿದ್ದವರು ಸಂಕಷ್ಟಕ್ಕೆ ಸಿಲುಕಿದ್ದರು ಎಂದು ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಜಯಂತ್ ಅವರು ಹೇಳಿದರು.
ಈ ವರ್ಷ ಪ್ರವಾಸಿ ತಾಣಗಳಲ್ಲಿ ಕೋವಿಡ್ ನಿಯಮಗಳು ಸಡಲಿಕೆಯಾಗಿದ್ದ ಕಾರಣ ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ವಾಗಿದೆ. ಇಲಾಖೆ ಅಂಕಿ ಅಂಶದಂತೆ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 2017 ರಲ್ಲಿ 42.60 ಲಕ್ಷ, 2018ರಲ್ಲಿ, 43.90 ಲಕ್ಷ, 2019ರಲ್ಲಿ 48.77ಲಕ್ಷ, 2020 ರಲ್ಲಿ 18.53 ಲಕ್ಷ, 2021 ರಲ್ಲಿ 35.19 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಪ್ರಸಕ್ತ ವರ್ಷದಲ್ಲಿ ನವೆಂಬರ್ ವೇಳೆಗೆ 85 ಲಕ್ಷವಾಗಿತ್ತು.