ಕರ್ನಾಟಕ

karnataka

By

Published : Jul 2, 2023, 8:10 PM IST

Updated : Jul 3, 2023, 8:15 AM IST

ETV Bharat / state

Tomato Price: ಕಾರವಾರದಲ್ಲಿ 100 ರೂಪಾಯಿಗೆ ತಲುಪಿದ ಟೊಮೆಟೊ ಬೆಲೆ: ತರಕಾರಿ ದರ ಏರಿಕೆಯಿಂದ ಜನ ಕಂಗಾಲು

ರಾಜ್ಯದಲ್ಲಿ ಮುಂಗಾರು ಮಳೆ ಅಭಾವದಿಂದ ಇಳುವರಿ ಕುಂಠಿತಗೊಂಡು ಟೊಮೆಟೊ ಬೆಲೆ ಗಗನಕ್ಕೇರಿದೆ.

tomato-price-reached-100-rupees-in-karwar
Tomato Price:ಕಾರವಾರದಲ್ಲಿ 100 ರೂಪಾಯಿಗೆ ತಲುಪಿದ ಟೊಮೆಟೊ ಬೆಲೆ: ತರಕಾರಿ ದರ ಏರಿಕೆಯಿಂದ ಜನ ಕಂಗಾಲು

ಕಾರವಾರದಲ್ಲಿ 100 ರೂಪಾಯಿಗೆ ತಲುಪಿದ ಟೊಮೆಟೊ ಬೆಲೆ

ಕಾರವಾರ: ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದರೇ ಮತ್ತೆ ಕೆಲವು ಜಿಲ್ಲೆಗಳಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಮಳೆ ಕೊರತೆ ಹಿನ್ನೆಲೆ ಹಾಗೂ ತಾಪಮಾನ ಹೆಚ್ಚಳದಿಂದಾಗಿ ಬೆಳೆಗಳ ಇಳುವರಿ ಕುಂಠಿತಗೊಂಡು ಬಹುತೇಕ ತರಕಾರಿ, ಹಣ್ಣು ಹಾಗೂ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ. ಮಾತ್ರವಲ್ಲದೆ ಟೊಮೆಟೊ ‌ಬೆಲೆ ಶತಕ ಬಾರಿಸಿದ್ದು, ಇದೀಗ ಸಾಮಾನ್ಯ ಜನರು ಟೊಮೆಟೊ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಕಳೆದ 15 ದಿನಗಳಿಂದ ನಿರಂತರವಾಗಿ ಮಳೆಯಾಗತೊಡಗಿದೆ. ಆದರೆ ಇದೇ ಮಳೆ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲ್ಬಾಗದಲ್ಲಿ ಆಗಿಲ್ಲ.‌ ಅದರಲ್ಲಿಯೂ ಬಯಲು ಸೀಮೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ಸುಳಿವೇ ಇಲ್ಲದಿರುವುದರಿಂದ ತರಕಾರಿ ಇಳುವರಿ ಕುಂಠಿತವಾಗಿ, ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತಿಲ್ಲ. ಇದರಿಂದ ತರಕಾರಿ ಬೆಲೆಗಳು ಗಗನಕ್ಕೇರಿವೆ.

ಮಾರುಕಟ್ಟೆಗಳಲ್ಲಿ ಕಳೆದ ವಾರ 80 ರೂ. ಇದ್ದ ಬೀನ್ಸ್ ಈಗ 120 ರಿಂದ 150 ರೂಪಾಯಿಗೆ ಏರಿದೆ. ಅದೇ ರೀತಿ ಟೊಮೆಟೊ 50 ರಿಂದ 100 ರೂ.ಗೆ ತಲುಪಿದೆ‌. ಬೆಂಡೆಕಾಯಿ 30 ರಿಂದ 80ಕ್ಕೆ, ಎಲೆಕೋಸು 10 ರಿಂದ 30ಕ್ಕೆ, ಕ್ಯಾರೆಟ್ 40 ರಿಂದ 60ಕ್ಕೆ, ಮೆಣಸು 50 ರಿಂದ 80ಕ್ಕೆ ಏರಿಕೆಯಾಗಿದೆ. ಇನ್ನು ಸೊಪ್ಪುಗಳ ಬೆಲೆಯೂ ಹೆಚ್ಚಾಗಿದ್ದು, ಕೊತ್ತಂಬರಿ ಕಟ್ಟಿನ ದರ 50ರೂ. ಪಾಲಕ್ 50ರೂ.ಗೆ 5ಕಟ್ಟು, ಹರಿವೆ 50 ರೂ .ಗೆ 3ಕಟ್ಟು, ಮೆಂತೆ 50ರೂ .ಗೆ 4 ಕಟ್ಟಿನಂತೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ ಹಣ್ಣಿನ ದರದಲ್ಲಿಯೂ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 180ರೂ ಇದ್ದ ಸೇಬು ಇದೀಗ 240 ರಿಂದ 260 ರೂಗೆ ಮಾರಾಟ ಮಾಡಲಾಗುತ್ತಿದೆ. ದಾಂಳಿಂಬೆ 100 ರೂ. ನಿಂದ 180 ರೂ. ಗೆ, ಕಿತ್ತಳೆ 100 ರೂ. ನಿಂದ 120 ರೂ.ಗೆ ಏರಿಕೆಯಾಗಿದೆ. ಆದರೆ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 10 ರಿಂದ 100 ರೂ. ವರೆಗೆ ಹಣ್ಣು ಹಾಗೂ ತರಕಾರಿಗಳ ಬೆಲೆ ಏರಿಕೆಯಾಗಿದೆ. ಇದರಿಂದ ಕಾರವಾರದ ಭಾನುವಾರದ ಸಂತೆ ಮಾರುಕಟ್ಟೆಯಲ್ಲಿ ಬಹುತೇಕ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ಗ್ರಾಹಕ ಪ್ರವೀಣ್ ಮಾತನಾಡಿ, ತರಕಾರಿ ಬೆಲೆ ದುಬಾರಿಯಾಗಿದೆ. ನಾವು ಕೂಲಿ ಮಾಡಿ ಜೀವನ ನಡೆಸುವವರು. ತರಕಾರಿಗಳ ಬೆಲೆ ಏರಿಕೆಯಾಗಿರುವುದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದರು. ವ್ಯಾಪಾರಿ ಅಹ್ಮದ್ ಭಾಷಾ ಮಾತನಾಡಿ, ಚಿಕ್ಕಮಗಳೂರು, ಹಳೇಬೀಡು, ಬೇಲೂರು ಭಾಗದಲ್ಲಿ ಮಳೆಯಾಗಿಲ್ಲ ಹಾಗಾಗಿ ತರಕಾರಿ ಬೆಲೆ ಏರಿಕೆಯಾಗಿದೆ. 25ಕೆಜಿ ಟೊಮೆಟೊಗೆ ಚಿಕ್ಕಮಗಳೂರಿನಲ್ಲಿ 2800 ರೂಪಾಯಿ ಬೆಲೆ ಇದೆ. ಅಂದರೆ ಕೆಜಿಗೆ 120 ಬಿತ್ತು, ಅದರೂ ನಾವು ಪ್ರತಿ ಕೆಜಿಗೆ 100 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇವೆ. ಬೆಲೆಯನ್ನು ನಾವು ಜಾಸ್ತಿ ಮಾಡಿಲ್ಲ, ಮಾರುಕಟ್ಟೆಯಲ್ಲೇ ಬೆಲೆ ಹೆಚ್ಚಾಗಿದೆ. ಮಳೆಯಾಗದಿದ್ದರೆ ಟೊಮೆಟೊ ಬೆಲೆ 200 ರೂಪಾಯಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ:Tomato: ಕೆಜಿಗೆ 20 ರೂಪಾಯಿಯಿಂದ ₹100ಕ್ಕೆ ಜಿಗಿದ ಟೊಮೆಟೊ ಬೆಲೆ! ಕಾರಣವೇನು ಗೊತ್ತೇ?

Last Updated : Jul 3, 2023, 8:15 AM IST

ABOUT THE AUTHOR

...view details