ಕಾರವಾರ(ಉತ್ತರ ಕನ್ನಡ):ಸುರಕ್ಷತಾ ಪ್ರಮಾಣಪತ್ರ ಪಡೆಯದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿರುವ ಸುರಂಗ ಮಾರ್ಗದಲ್ಲಿ ಕಳೆದ ಎರಡು ದಿನದ ಹಿಂದೆ ಜಿಲ್ಲಾಡಳಿತವು ಸಂಚಾರಕ್ಕೆ ನಿರ್ಬಂಧ ಹೇರಿತ್ತು. ಆದರೂ ಸಹ ಟೋಲ್ ವಸೂಲಾತಿ ಮುಂದುವರಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಸತೀಶ್ ಸೈಲ್ ಇಂದು ತಮ್ಮ ಬೆಂಬಲಿಗರೊಂದಿಗೆ ಅಂಕೋಲಾದ ಹಟ್ಟಿಕೇರಿ ಟೋಲ್‌ಗೇಟ್ ಬಳಿ ತೆರಳಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಮಣಿದ ಕಂಪನಿ ಟೋಲ್ ಸಂಗ್ರಹ ಸ್ಥಗಿತಗೊಳಿಸಿದೆ. ಈ ಮೂಲಕ ಹೆದ್ದಾರಿಯಲ್ಲಿ ಸಂಚರಿಸುವ ಸವಾರರಿಗೆ ರಿಲೀಫ್ ನೀಡಿದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ನ್ನು ಚತುಷ್ಪಥಗೊಳಿಸುವ ಕಾಮಗಾರಿ ಕಳೆದ ಎಂಟು ವರ್ಷಗಳಿಂದಲೂ ನಡೆಯುತ್ತಿದ್ದರೂ ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಅರೆಬರೆ ಹೆದ್ದಾರಿ ಕಾಮಗಾರಿ ಮಾಡಿರುವುದು, ಅವೈಜ್ಞಾನಿಕವಾಗಿ ಡೈವರ್ಸನ್‌ಗಳನ್ನ ಇಟ್ಟಿರುವುದು, ಬೀದಿ ದೀಪಗಳನ್ನು ಅಳವಡಿಸದೇ ಇರುವುದರಿಂದ ವಾಹನ ಸವಾರರು ದಿನನಿತ್ಯ ಅಪಘಾತಕ್ಕೆ ತುತ್ತಾಗುವಂತಾಗಿತ್ತು. ಹೆದ್ದಾರಿ ಬದಿ ಕೊರೆದ ಗುಡ್ಡಗಳನ್ನು ಮಳೆಗಾಲದಲ್ಲೂ ಸರಿಪಡಿಸದ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದ್ದವು. ಮಳೆಯಾದರೆ, ಸುರಂಗದಲ್ಲಿ ನೀರು ಸೋರುತ್ತಿದೆ. ಅಲ್ಲದೇ ಕಾರವಾರದ ಸುರಂಗ ಮಾರ್ಗಕ್ಕೆ ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೇ ಸಂಚಾರಕ್ಕೆ ಮುಕ್ತ ಮಾಡಿಕೊಟ್ಟಿರುವ ಬಗ್ಗೆ ದೂರು ಕೇಳಿಬಂದಿದ್ದವು.
ಟೋಲ್ ಸಂಗ್ರಹ ಸ್ಥಗಿತ:ಇತ್ತೀಚಿಗೆ ಕಾರವಾರದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾ ವ್ಯಾಪ್ತಿಯ ಮೂರೂ ಟೋಲ್‌ಗೇಟ್‌ಗಳನ್ನು ಬಂದ್ ಮಾಡಿ ಕಾರವಾರದ ಸುರಂಗ ಮಾರ್ಗವನ್ನೂ ಬಂದ್ ಮಾಡಲು ಸೂಚಿಸಿದ್ದರು. ಈ ನಿಟ್ಟಿನಲ್ಲಿ ಕಾರವಾರದ ಸುರಂಗವನ್ನು ಜಿಲ್ಲಾಧಿಕಾರಿ ಕಳೆದ ಎರಡು ದಿನದ ಹಿಂದೆ ಆದೇಶ ಹೊರಡಿಸಿ ಮುಚ್ಚಿಸಿದ್ದರು. ಆದರೆ, ಟೋಲ್ ಸಂಗ್ರಹ ಬಂದ್ ಮಾಡುವಂತೆ ಸೂಚನೆ ನೀಡಿ ಮೂರು ದಿನಗಳೇ ಕಳೆದರೂ ಜಿಲ್ಲೆಯ ಮೂರೂ ಟೋಲ್‌ಗೇಟ್‌ನಲ್ಲಿ ಸುಂಕ ವಸೂಲಾತಿ ಮುಂದುವರಿಸಲಾಗಿತ್ತು. ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್‌ಗೇಟ್ ಬಳಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.