ಕಾರವಾರ(ಉತ್ತರ ಕನ್ನಡ): ದಂಪತಿ ತೆರಳುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಕಂಟೈನರ್ ಡಿಕ್ಕಿಯಾಗಿ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟು ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಗೇರುಸೊಪ್ಪ ವೃತ್ತದ ಬಳಿ ನಡೆದಿದೆ. ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಸಾವಿತ್ರಿ ಭಟ್(64) ಮೃತ ದುರ್ದೈವಿ.
ಪತಿ ಗಂಭೀರ ಗಾಯಗೊಂಡಿದ್ದು ಹೊನ್ನಾವರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಕುಮಟಾ ಭಾಗದಿಂದ ಹೊನ್ನಾವರಕ್ಕೆ ಆಗಮಿಸುತ್ತಿದ್ದ ದಂಪತಿಗೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಹಿಳೆಯ ದೇಹ ಛದ್ರ ಛಿದ್ರವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಉಳ್ಳಾಲ (ದಕ್ಷಿಣ ಕನ್ನಡ): ಗೋಣಿಚೀಲದಲ್ಲಿ 40,000 ರೂ. ಮೌಲ್ಯದ ಗಾಂಜಾ ತುಂಬಿಕೊಂಡು ಬೈಕ್ನಲ್ಲಿ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿ ತಚ್ಚಣಿ ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಮಂಜೇಶ್ವರ ಸುಂಕದಕಟ್ಟೆಯ ಮೊಹಮ್ಮದ್ ರಾಝಿಕ್ ಎಂಬಾತನನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಅಸ್ಗರ್ ತಲೆಮರೆಸಿಕೊಂಡಿದ್ದಾನೆ. ಇಬ್ಬರು ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಗಾಂಜಾ ಮಾರಾಟ ಮಾಡಲು ಬಂದಿದ್ದರು.
ಯಮಹಾ R15 ಬೈಕ್ನಲ್ಲಿ 4 ಕೆ.ಜಿ ತೂಕದ 40,000 ರೂ. ಮೌಲ್ಯದ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತನಿಂದ ಗಾಂಜಾ ಹಾಗೂ 1 ಲಕ್ಷ ರೂ. ಸೇರಿದಂತೆ ಒಟ್ಟು 1,40,000 ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆ ಮಂಜೇಶ್ವರ, ಕಾಸರಗೋಡು, ಕುಂಬ್ಳೆ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಗಾಂಜಾ ಮಾರಾಟ ಪ್ರಕರಣಗಳಿವೆ.
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು:ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿರುವ ಘಟನೆ ರಾ.ಹೆ 66ರ ಕೋಟೆಕಾರು ಬೀರಿ ಸಮೀಪ ಸೋಮವಾರ ತಡರಾತ್ರಿ ನಡೆದಿದೆ. ಸ್ಥಳೀಯ ಯುವಕರ ತಂಡ ತಕ್ಷಣ ಕಾರು ಚಾಲಕನನ್ನು ಹೊರಗೆಳೆದು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ. ಹಳೆಯಂಗಡಿ ನಿವಾಸಿ ನೌಫಾಲ್ ಗಾಯಗೊಂಡವರು. ತಲಪಾಡಿ ಕಡೆಯಿಂದ ಹಳೆಯಂಗಡಿಯತ್ತ ತೆರಳುವ ವೇಳೆ ಕಾರು ನಿಯಂತ್ರಣ ಕಳೆದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.