ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನ ಉಳವಿ ಗ್ರಾಮದ ವ್ಯಾಪ್ತಿಯಲ್ಲಿ 10 ದನಗಳನ್ನು ಬೇಟೆಯಾಡಿ ಆತಂಕ ಸೃಷ್ಟಿಸಿದ್ದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು, ಹಂಪಿ ಮೃಗಾಲಯಕ್ಕೆ ಸ್ಥಳಾಂತರ ಮಾಡಿದ್ದಾರೆ. ಕಳೆದ ಒಂದು ವಾರದಿಂದ ಹುಲಿ ದಾಳಿಯಿಂದ ತತ್ತರಿಸಿದ್ದ ಜನತೆ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ದಿನವೂ ಎರಡು ಮೂರು ದನ ಕರುಗಳನ್ನು ಬೇಟೆಯಾಡುತ್ತಿದ್ದ ಹುಲಿ ಸದ್ಯ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಚಂದ್ರಾಳಿ, ಹೆಣಕೋಳ ಬಳಿ 3 ದನಗಳನ್ನು ಮತ್ತು ಮೆಳೆಯಲ್ಲಿ ಮೂರು ಎತ್ತುಗಳನ್ನು ಹುಲಿ ಬೇಟೆಯಾಡಿತ್ತು. ಸೆರೆ ಹಿಡಿದ ಹುಲಿಗೆ ವಯಸ್ಸಾದ ಕಾರಣ ಕೊಟ್ಟಿಗೆಯೊಳಗೆ ಕಟ್ಟಿದ ದನಗಳನ್ನೇ ಬಂದು ಹಿಡಿಯುತ್ತಿತ್ತು ಎನ್ನಲಾಗಿದೆ. ಹುಲಿ ದಾಳಿಯಿಂದ ದನಗಳನ್ನು ಸಾಯುತ್ತಿದ್ದ ಕಾರಣ ಸ್ಥಳೀಯರು ಅರಣ್ಯ ಇಲಾಖೆ ಮೇಲೆ ಕಿಡಿಕಾರುತ್ತಿದ್ದರು. ಶಾಸಕ ಆರ್.ವಿ.ದೇಶಪಾಂಡೆ, ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೂ ಹುಲಿ ಸೆರೆಹಿಡಿದು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.