ಕರ್ನಾಟಕ

karnataka

ಭಟ್ಕಳ: ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

By ETV Bharat Karnataka Team

Published : Oct 13, 2023, 9:47 PM IST

ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 3 ಪ್ರವಾಸಿಗರ ರಕ್ಷಣೆ
ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 3 ಪ್ರವಾಸಿಗರ ರಕ್ಷಣೆ

ಭಟ್ಕಳ : ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದ ಸಿದ್ಧಾರ್ಥ (24), ದೀಕ್ಷಿತ್ (20), ಸಂತೋಷ (24) ರಕ್ಷಣೆಗೊಳಗಾದವರು.

ಹಂಸಬಾವಿಯಿಂದ ಐವರು ಸ್ನೇಹಿತರು ಸೇರಿ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದರು. ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಸ್ಥಳದಲ್ಲಿದ್ದವರು ಚೀರಾಡಿಕೊಂಡಿದ್ದು ತಕ್ಷಣ ಲೈಫ್ ಗಾರ್ಡ್ ಸಿಬ್ಬಂದಿಯಾದ ಚಂದ್ರಶೇಖರ್ ದೇವಾಡಿಗ, ಜಯರಾಮ, ಪಾಂಡು, ಹನುಮಂತ್‌ ಮೂವರನ್ನು ರಕ್ಷಿಸಿದ್ದಾರೆ.

ಚರ್ಮರೋಗ ತಜ್ಞ ಡಾ. ಎಚ್. ಟಿ ಉಮೇಶ

ವೈದ್ಯ ನಾಪತ್ತೆ: ಕರ್ತವ್ಯಕ್ಕೆಂದು ಹೇಳಿ ಮನೆಯಿಂದ ಹೋದ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ಎಚ್.ಟಿ ಉಮೇಶ ನಾಪತ್ತೆಯಾಗಿದ್ದಾರೆ. ನಿಟ್ಟೂರು ಹರಪನಹಳ್ಳಿ ಮೂಲದ ಭಟ್ಕಳ ಡಿ.ಪಿ.ಕಾಲೊನಿ ನಿವಾಸಿ ಡಾ.‌ಉಮೇಶ್, ಅಕ್ಟೋಬರ್ 10ರಂದು ಬೆಳಗ್ಗೆ ಕರ್ತವ್ಯಕ್ಕೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದರು. ಅಂದು ರಾತ್ರಿಯಾದರೂ ವಾಪಸಾಗಿರಲಿಲ್ಲ. ಫೋನ್ ಸ್ವಿಚ್​ ಆಫ್ ಆಗಿದ್ದು, ಎಲ್ಲೆಡೆ ಹುಡುಕಾಡಲಾಗಿತ್ತು. ಕೊನೆಗೆ ಪತ್ನಿ ಪೊಲೀಸ್ ದೂರು ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಇಬ್ಬರು ಶವವಾಗಿ ಪತ್ತೆ: ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಪ್ರವಾಸಿಗರ ಶವ ಕುಮಟಾದ ಕಾಗಲ್ ಕಡಲತೀರದ ಬಳಿ (ಜೂನ್ 27-2022) ಪತ್ತೆಯಾಗಿತ್ತು. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಕಿರಣ್, ತೇಜು ಮೃತಪಟ್ಟಿದ್ದರು. ‌

ಬೆಂಗಳೂರಿನಿಂದ ಒಟ್ಟು 87 ವಿದ್ಯಾರ್ಥಿಗಳು ಉತ್ತರಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸಿದ್ದರು. ಕುಮಟಾದ ಕಾಗಲ್ ಬಳಿ ಉಳಿದುಕೊಂಡಿದ್ದ ಪ್ರವಾಸಿಗರು ಸಮುದ್ರದಲ್ಲಿ ಇಳಿದು ಆಟ ಆಡುತ್ತಿರುವಾಗ ಒಟ್ಟು ನಾಲ್ವರು ಕೊಚ್ಚಿ ಹೋಗಿದ್ದರು. ಈ ಪೈಕಿ ಇಬ್ಬರು ಅಂದೇ ಶವವಾಗಿ ಕಂಡುಬಂದಿದ್ದರು. ಇನ್ನಿಬ್ಬರ ಶವ ಪತ್ತೆಯಾಗಿರಲಿಲ್ಲ.

ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಕರಾವಳಿ ಕಾವಲು ಪಡೆ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದರೆ, 27ರಂದು ಬೆಳಗ್ಗೆ ಕಡಲ ತೀರದಲ್ಲಿ ಇಬ್ಬರ ಮೃತದೇಹ ದೊರೆತಿತ್ತು. ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿತ್ತು. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಹಸುಗಳ ಮೈ ತೊಳೆಯಲು ಹೋದ ರೈತ ನೀರಿನಲ್ಲಿ ಮುಳುಗಿ ಸಾವು

ABOUT THE AUTHOR

...view details