ಕಾರವಾರ(ಉತ್ತರ ಕನ್ನಡ):ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು ಎಂದು ಮಹಿಳೆಯೊಬ್ಬರು ಬ್ಯಾಂಕ್ ಖಾತೆಯಿಂದ 3.24 ಲಕ್ಷ ರೂ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ ತಕ್ಷಣ ಪೊಲೀಸರು ಹಣ ವರ್ಗಾವಣೆಗೆ ಬ್ಯಾಂಕ್ ಮೂಲಕ ತಡೆ ಹಿಡಿದ ಹಿನ್ನೆಲೆಯಲ್ಲಿ ಮಹಿಳೆಗೆ 3 ಲಕ್ಷ ರೂ. ವಾಪಸ್ ಬಂದಿದೆ.
ಕಳೆದ ಅಕ್ಟೋಬರ್ ಕೊನೆಯ ವಾರ ಕಾರವಾರ ನಗರದ ನಿವಾಸಿ ವಿದ್ಯಾ ಕಾಮತ್ ಅವರು 3.24 ಲಕ್ಷ ರೂ. ಸೈಬರ್ ವಂಚನೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಅವರು ತಮ್ಮ ಚಿಕ್ಕಮ್ಮನ ಎಸ್ಬಿಐ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು. ಪಾನ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಬಂದ ಎಸ್ಎಂಎಸ್ ಲಿಂಕ್ನಲ್ಲಿ ಖಾತೆಯ ಎಲ್ಲ ಮಾಹಿತಿ ನಮೂದಿಸಿದ್ದರು. ಬಳಿಕ ಅವರ ಚಿಕ್ಕಮ್ಮನ ಖಾತೆಯಿಂದ 99 ಸಾವಿರ ರೂ.ನಂತೆ ಮೂರು ಬಾರಿ ಹಾಗೂ ಒಮ್ಮೆ 24 ಸಾವಿರ ರೂ. ಇನ್ನೊಂದು ಖಾತೆಗೆ ವರ್ಗಾವಣೆಯಾಗಿತ್ತು.