ಕಾರವಾರ: ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಇಲ್ಲಿನ ಬೇಲೆಹಿತ್ತಲ ನಿವಾಸಿ ತುಳುಸು ಗೌಡ, ಮೂಲೇಕೇರಿ ನಿವಾಸಿ ಶ್ರೀಧರ ಗೌಡ ಹಾಗೂ ಮೂಲತಃ ನೇಪಾಳದ ಸದ್ಯ ಕುಡ್ಲೆ ನಿವಾಸಿ ಸಂತ ಬದ್ದೂರ್ ಬಂಧಿತರು.
ಈ ಮೂವರು ಓಂ ಬೀಚ್ ರಸ್ತೆಯಲ್ಲಿ ಮಾದಕ ವಸ್ತು ಚರಸ್ ಇರಿಸಿಕೊಂಡು ವಿದೇಶಿಗರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಸಿಪಿಐ ಮಂಜುನಾಥ ಎಂ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಆರೋಪಿಗಳಿಂದ ಸುಮಾರು 10 ಲಕ್ಷ ಮೌಲ್ಯದ 1 ಕೆ.ಜಿ 648 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದೆ. ಕುಡ್ಲೆ ನಿವಾಸಿ ಸಂತ ಬದ್ದೂರ್ ಕಳೆದ 17 ವರ್ಷಗಳ ಹಿಂದೆ ನೇಪಾಳದಿಂದ ಆಗಮಿಸಿ ಕುಡ್ಲೆಯಲ್ಲಿ ವಾಸವಿದ್ದಾನೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿಚಾರಣೆ ಮುಂದುವರೆದಿದೆ.
ಅಡಿಕೆ ಕಳ್ಳರ ಬಂಧನ: ಯಲ್ಲಾಪುರ ಪಟ್ಟಣದ ಹೊರವಲಯದಲ್ಲಿರುವ ಸವಣಗೇರಿಯ ದುರ್ಗಾಂಬಾ ಸೇಲ್ಸ್ ವಕಾರಿಯಿಂದ ಅಡಕೆ ಕದ್ದ ಆರೋಪದಡಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ತಾಲೂಕಿನ ಮಾಸೂರಿನ ಮಹೇಶ ಈರಾ ಗೌಡ, ಯಲ್ಲಾಪುರದ ಇಸ್ಲಾಂ ಗಲ್ಲಿಯ ಸಫ್ರಾಜ್ ಅಬ್ದುಲ್ ಸಾಬ ಬಡಗಿ, ಉದ್ಯಮ ನಗರದ ಪರಶುರಾಮ ಬಾಬು ಕಾಂಬಳೆ, ಕುಮಟಾ ತಾಲೂಕಿನ ಹೊಸೇರಿಯ ಶಶಿಧರ ಲಿಂಗಪ್ಪ ಪಟಗಾರ, ಹರೀಶ ಮಾರಪ್ಪ ಪಟಗಾರ, ನವೀನ ಶ್ರೀಪಾದ ಪಟಗಾರ ಬಂಧಿತರಾಗಿದ್ದಾರೆ.
ಇವರು ಮಾ.13 ರಂದು ರಾತ್ರಿ ಸವಣಗೇರಿಯ ದುರ್ಗಾಂಬಾ ಸೇಲ್ ವಕಾರಿಯ ಮೇಲ್ಛಾವಣಿಯನ್ನು ತೆಗೆದು ಒಳನುಗ್ಗಿ 4 ಕ್ವಿಂಟಲ್ ಚಾಲಿ ಅಡಕೆ ಹಾಗೂ 80 ಕೆ.ಜಿ ಕೆಂಪು ಅಡಕೆ ಸೇರಿ ಒಟ್ಟು 1.45 ಲಕ್ಷ ರೂ ಮೌಲ್ಯದ ಅಡಕೆ ಕಳವು ಮಾಡಿದ್ದರು. ಈ ಕುರಿತು ವಕಾರಿಯ ಮಾಲೀಕ ಗಣೇಶ ಭಟ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ ಕಳ್ಳತನ ಮಾಡಿದ 4 ಕ್ವಿಂಟಲ್ ಅಡಿಕೆ, ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.